ಸ್ಯಾಂಟಿಯಾಗೋ: ಇತ್ತೀಚೆಗಷ್ಟೇ ಹಾಂಗ್ ಕಾಂಗ್ ನಲ್ಲಿ ಸತತ ಮೂರು ತಿಂಗಳ ಕಾಲ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಕೊನೆಗೂ ಚೀನಾ ಸರಕಾರ ಆರೋಪಿಗಳ ಹಸ್ತಾಂತರ ಮಸೂದೆ ವಾಪಸ್ ಪಡೆದಿತ್ತು. ಇದೀಗ ಚಿಲಿಯಲ್ಲಿಯೂ ಲಕ್ಷಾಂತರ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿಲಿಯಲ್ಲಿ ಭಾರೀ ಪ್ರತಿಭಟನೆಗೆ ಕಾರಣ ಏನು?
ದೇಶದಲ್ಲಿ ಅಮೂಲಾಗ್ರವಾಗಿ ಆರ್ಥಿಕ ಸುಧಾರಣೆ ಮತ್ತು ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೇರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಹತ್ತು ಲಕ್ಷ ಮಂದಿ ಚಿಲಿಯಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿಲಿಯ ಬೀದಿಗಿಳಿದಿರುವ ಲಕ್ಷಾಂತರ ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಸ್ಥಳೀಯ ಹಾಗೂ ರಾಷ್ಟ್ರದ ಧ್ವಜವನ್ನು ಹಿಡಿದು 1973ರಿಂದ 90ರ ದಶಕದವರೆಗೆ ಆಡಳಿತ ನಡೆಸಿದ್ದ ಸರ್ವಾಧಿಕಾರಿ ಆಗೊಸ್ಟೋ ಪಿನೋಶೆಟ್ ಕಾಲದ ಪ್ರತಿರೋಧದ ಹಾಡನ್ನು ಹಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದೊಂದು ಐತಿಹಾಸಿಕ ದಿನ ಎಂದು ಸ್ಯಾಂಟಿಯಾಗೋ ಗವರ್ನರ್ ಕಾರ್ಲಾ ರುಬಿಲಾರ್ ಟ್ವೀಟರ್ ನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಶ್ಲಾಘಿಸಿರುವ ಗವರ್ನರ್ ಇದು ನೂತನ ಚಿಲಿಯ ಕನಸನ್ನು ಪ್ರತಿನಿಧಿಸುತ್ತಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಯಾಂಟಿಯಾಗೋ ಟೌನ್ ಹಾಲ್ ಸಮೀಪ ಆಗಮಿಸುತ್ತಿರುವವರ ಸಂಖ್ಯೆಯೇ 8,20,000 ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ ಕೆಲವು ವಾರಗಳಿಂದ ದೇಶದಲ್ಲಿನ ಸಾಮಾಜಿಕ ಆರ್ಥಿಕ ಬೆಳವಣಿಗೆಯ ಕುಸಿತದಿಂದಾಗಿ ಕಡಿಮೆ ಸಂಬಳ, ಪಿಂಚಣಿ ಪಡೆಯುವಂತಾಗಿದೆ. ದುಬಾರಿ ಆರೋಗ್ಯ ಸೇವೆ ಮತ್ತು ಶಿಕ್ಷಣ. ಅಷ್ಟೇ ಅಲ್ಲ ಶ್ರೀಮಂತ, ಬಡವರ ನಡುವಿನ ಅಂತರ ಹೆಚ್ಚುತ್ತಿರುವುದು ಚಿಲಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿಯವಂತೆ ಮಾಡಿದೆ.