Advertisement

ಶಾಲಾ ವಾಹನಗಳಲ್ಲಿ 1098 ಮಾಹಿತಿ ಕಡ್ಡಾಯ: ಜಿಲ್ಲಾಧಿಕಾರಿ

11:57 PM Feb 25, 2021 | Team Udayavani |

ಉಡುಪಿ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಖಾಸಗಿ ಶಾಲಾ ಬಸ್‌ಗಳಲ್ಲಿ, ಮಕ್ಕಳಿಗೆ ಸ್ಪಷ್ಟವಾಗಿ ಕಾಣುವಂತೆ ಚೈಲ್ಡ್‌ಲೈನ್‌ ಸಂಖ್ಯೆ 1098 ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಕುರಿತಂತೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚಿಸಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಆಯುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಸಬೇಕು. ಬಂದರಿನ ಗೇಟಿನಲ್ಲಿ ಮಕ್ಕಳು ಒಳ ಪ್ರವೇಶಿಸದಂತೆ ತಡೆಯಲು ಬಂದರು ಇಲಾಖೆಗೆ ಎಚ್ಚರಿಕೆ ನೀಡಿದರು.

ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಮತ್ತು ಆಪ್ತ ಸಮಾಲೋಚಕರನ್ನು ಗುರುತಿಸಬೇಕು. ಮಕ್ಕಳ ರಕ್ಷಣಾ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಬಗ್ಗೆ ಎಲ್ಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವಂತೆ ಡಿಸಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಜನವರಿವರೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ 31 ಗಂಡು ಮತ್ತು 53 ಹೆಣ್ಣು ಮಕ್ಕಳ ಪ್ರಕರಣಗಳು ಬಂದಿದ್ದು, ಹಿಂದಿನ ಬಾಕಿ ಪ್ರಕರಣಗಳೂ ಸೇರಿದಂತೆ ಒಟ್ಟು 31 ಗಂಡು ಹಾಗೂ 57 ಹೆಣ್ಣು ಮಕ್ಕಳ ಪ್ರಕರಣ ಇತ್ಯರ್ಥಗೊಳಿಸಿದ್ದು, 5 ಹೆಣ್ಣು ಮಕ್ಕಳ ಪ್ರಕರಣ ಬಾಕಿ ಇದೆ. ಪುರ್ನವಸತಿ ಒದಗಿಸುವ ಕುರಿತ 93 ಪ್ರಕರಣಗಳಲ್ಲಿ 23 ಮಕ್ಕಳ ಪಾಲನಾ ಸಂಸ್ಥೆಗಳಿಗೆ ವರ್ಗಾಯಿಸಿದ್ದು, 62ನ್ನು ಹೆತ್ತವರ/ಪೋಷಕರ ವಶಕ್ಕೆ ಬಿಡುಗಡೆ ಮಾಡಿದೆ. 7ನ್ನು ದತ್ತು ಕೇಂದ್ರಗಳಿಗೆ ಮತ್ತು ಒಂದನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್‌ ಮಾಹಿತಿ ನೀಡಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್‌. ಶೇಷಪ್ಪ, ಕಾರ್ಮಿಕ ಅಧಿಕಾರಿ ಕುಮಾರ್‌, ಕೋಟ ಠಾಣಾ ಸಹಾಯಕ ಉಪ ನಿರೀಕ್ಷಕಿ ಮುಕ್ತಾ, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ತ್ತೈಮಾಸಿಕ ಸಭೆ ನಡೆಸಿ
ಶಾಲಾ ಬಸ್‌ಗಳಲ್ಲಿ ಚೈಲ್ಡ್‌ಲೈನ್‌ ಸಂಖ್ಯೆ ಅಳವಡಿಸುವುದರ ಜತೆಗೆ ಮಕ್ಕಳಿಗೆ ಆ ಸಂಖ್ಯೆಯ ಪ್ರಯೋಜನ ಕುರಿತು ಮಾಹಿತಿ ನೀಡಬೇಕು ಹಾಗೂ ಶಾಲಾ ವಾಹನಗಳಲ್ಲಿ ಮಕ್ಕಳು ದೂರು ನೀಡಲು ದೂರು ಪೆಟ್ಟಿಗೆ ಅಳವಡಿಸಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಪಟ್ಟಂತೆ ಗ್ರಾ.ಪಂ. ಮಟ್ಟದಲ್ಲಿ ರಚಿಸಲಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಸಭೆಗಳನ್ನು ತ್ತೈಮಾಸಿಕವಾಗಿ ನಡೆಸಿ, ಸಭೆಯಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ತೆಗೆದುಕೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next