Advertisement

ಗುತ್ತಿಗೆ ವಂಚಿತ ಸಂಸ್ಥೆಯಿಂದಲೇ 108 ಚಾಲನೆ!

06:00 AM Jun 28, 2018 | |

ಬೆಂಗಳೂರು: ಸಾರ್ವಜನಿಕರ ತುರ್ತು ಚಿಕಿತ್ಸೆಗಾಗಿ ಆರಂಭಿಸಿದ “108 ಆರೋಗ್ಯ ಕವಚ’ ಉಚಿತ ಆ್ಯಂಬುಲೆನ್ಸ್‌ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಗುತ್ತಿಗೆ ವಂಚಿತ ಸಂಸ್ಥೆಯೇ ಕಳೆದ 11
ತಿಂಗಳಿನಿಂದ ಸೇವೆ ಮುಂದುವರಿಸಿದೆ!

Advertisement

ಗುತ್ತಿಗೆ ಪೂರ್ಣಗೊಳ್ಳಲು 1 ವರ್ಷ ಇರುವಂತೆಯೇ ಸಿಕಂದರಾಬಾದ್‌ನ ಎಮರ್ಜೆ ನ್ಸಿ ಮ್ಯಾನೇಜ್‌ಮೆಂಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಇಎಂಆರ್‌ಐ) ಜತೆಗಿನ ಒಪ್ಪಂದ ರದ್ದುಗೊಳಿಸಲಾಗಿತ್ತು. ಆದರೆ ಅಧಿಕಾರಿಗಳು ಸೂಕ್ತ ನಿಯಮಾವಳಿ ರೂಪಿಸಿ ಹೊಸ ಟೆಂಡರ್‌ ಪ್ರಕ್ರಿಯೆ ನಡೆಸದ ಕಾರಣ ಹಳೆಯ ಸಂಸ್ಥೆಯ ಸೇವೆಯೇ ಮುಂದುವರಿದಿದೆ.

ತರ್ತುಚಿಕಿತ್ಸೆಗಾಗಿ ಅನುಕೂಲವಾಗುವಂತೆ ಸರ್ಕಾರ “108 ಆರೋಗ್ಯ ಕವಚ’ ಯೋಜನೆಯಡಿ ಉಚಿತ ಆ್ಯಂಬುಲೆನ್ಸ್‌ ಸೇವೆ ಆರಂಭಿಸಿತ್ತು. ಇಎಂಆರ್‌ಐ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ 2008ರ ಆ. 14ರಂದು ಒಡಂಬಡಿಕೆ ಮಾಡಿಕೊಂಡು 10 ವರ್ಷ ನಿರ್ವಹಣೆಯನ್ನು ಸಂಸ್ಥೆಗೆ ವಹಿಸಿತ್ತು.

ಅಕ್ರಮ- ಲೋಪ ಆರೋಪ: ಆರಂಭಿಕ ಕೆಲ ವರ್ಷಗಳ ನಂತರ ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆ ಆರೋಪಗಳು ಕೇಳಿಬರಲಾರಂಭಿಸಿದವು. ಮುಖ್ಯವಾಗಿ ನಿಯಮ ಪ್ರಕಾರ ಆ್ಯಂಬುಲೆನ್ಸ್‌ಗಳ ನಿರ್ವಹಣೆ ಮಾಡದಿರುವುದು, ಸಿಬ್ಬಂದಿ ಮೇಲೆ ಒತ್ತಡ ಹೇರುವುದು, ಆ್ಯಂಬುಲೆನ್ಸ್‌ ಸಂಚರಿಸದಿದ್ದರೂ ಹೆಚ್ಚುವರಿ ಕಿ.ಮೀ. ಅಂತರ ಕ್ರಮಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿ, ರೋಗಿಗಳಿಗೆ ಸ್ಪಂದಿಸದಿರುವುದು ಇತರೆ ಆರೋಪ ಕೇಳಿಬಂದವು.

ಹೀಗಾಗಿ ನೋಟಿಸ್‌ ನೀಡಲಾಗಿತ್ತು ಇದರ ಬಳಿಕವೂ ನಿರ್ದೇಶನ ಪಾಲನೆಯಾಗಿರಲಿಲ್ಲ. 2017ರ ಅ. 13ರಿಂದ
ಅನ್ವಯವಾಗುವಂತೆ ಇಎಂಆರ್‌ಐನ ಗುತ್ತಿಗೆ ರದ್ದುಪಡಿಸಲಾಯಿತು.

Advertisement

ಟೆಂಡರ್‌ ಪ್ರಕ್ರಿಯೆ ವಿಳಂಬ: ಮೂರು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಕೈಗೊಂಡು ಅರ್ಹ ಸಂಸ್ಥೆಗೆ ಗುತ್ತಿಗೆ ನೀಡಬೇಕಿತ್ತು. ಆದರೆ ಈ ಪ್ರಕ್ರಿಯೆ ನಡೆಯಲಿಲ್ಲ. ಜತೆಗೆ ಚುನಾವಣೆ ನೀತಿ ಸಂಹಿತೆಯಿಂದಾಗಿಯೂ ವಿಳಂಬ ವಾಯಿತು. ಗುತ್ತಿಗೆ ರದ್ದಾಗಿದ್ದರೂ ಇಎಂ ಆರ್‌ಐ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿರಲಿಲ್ಲ. ಆದರೆ ಆ ಸಂಸ್ಥೆ ಹೊಸ ಟೆಂಡರ್‌ನಲ್ಲಿ ಪಾಲ್ಗೊಳ್ಳದಂತೆ ಇಲಾಖೆ ಷರತ್ತು ವಿಧಿಸಿತ್ತು. ಇದನ್ನು ಇಎಂಆರ್‌ಐ ನ್ಯಾಯಾಲಯದಲ್ಲಿ ಪ್ರಶ್ನಿಸಿ ಟೆಂಡರ್‌ನಲ್ಲಿ
ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡಿತ್ತು.

ನಿಯಮಗಳನ್ನು ವೈಜ್ಞಾನಿಕವಾಗಿ ರೂಪಿಸದ ಕಾರಣ ಟೆಂಡರ್‌ ಪ್ರಕ್ರಿಯೆ ಮುಂದೂಡಿಕೆಯಾಗುತ್ತಿದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ. 2 ತಿಂಗಳಿನಿಂದೀಚೆಗೆ ಸಂಸ್ಥೆಯ ಸೇವೆ ಮೇಲೆ ಇಲಾಖೆ ಒಂದಿಷ್ಟು ನಿಗಾ ಇರಿಸಿದೆ. ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟ ದಲ್ಲಿ ಸೇವೆಯ ಗುಣಮಟ್ಟ, ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು. ದಿಢೀರ್‌ ತಪಾಸಣೆ ಕೈಗೊಳ್ಳಬೇಕು. ತಕ್ಷಣ ವರದಿ ಮಾಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಆ್ಯಂಬುಲೆನ್ಸ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ನಿರಂತರ ಮೇಲ್ವಿಚಾರಣೆಗೆ ಸೂಚಿಸಲಾಗಿದೆ. ಲೋಪ ಕಂಡುಬಂದರೆ ಹಣ ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನಷ್ಟೇ ಪಾವತಿಸಲಾಗುತ್ತಿದೆ. ಶೀಘ್ರವೇ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.
–  ಎಂ.ವಿ. ಸಾವಿತ್ರಿ, ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next