ಬೆಂಗಳೂರು: ಬರೋಬ್ಬರಿ 108 ಪ್ರಕರಣಗಳಲ್ಲಿ ಭಾಗಿಯಾಗಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಶ್ವಾಕ್ ಅಹಮ್ಮದ್ ಬಂಧಿತ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈತ 2009-2010ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಹೆಸರಿನ ಸಂಸ್ಥೆ ತೆರೆದು, ಹೊಸಕೋಟೆ ಬಳಿ ಕೃಷಿ ಜಮೀನುಗಳನ್ನು ಅಕ್ರಮವಾಗಿ ಕಂದಾಯ ನಿವೇಶನಗಳೆಂದು ಮೋಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿದ್ದ. ಈ ಸಂಬಂಧ ರಾಮಮೂರ್ತಿ ನಗರ, ಇಂದಿರಾ ನಗರ ಮತ್ತು ಆಶೋಕ ನಗರ ಠಾಣೆಗಳಲ್ಲಿ ಒಟ್ಟು 108 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಹೆಚ್ಚಿನ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಲ್ಯಾಂಡ್ ರೆವಿನ್ಯೂ ಆಕ್ಟ್ ಪ್ರಕಾರ ಆರೋಪಿಯನ್ನು ಬಂಧಿಸಿ, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ನಂತರ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, 2016 ರಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.