ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪದೇಪದೇ ಸಂಭವಿಸುತ್ತಿರುವ ಅಪಘಾತಗಳಿಂದ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದು ರಾಮನಗುಳಿಯಿಂದ ಅಂಕೋಲಾ ವ್ಯಾಪ್ತಿಯ ಸುಮಾರು 50 ಕಿಮೀ ಮಧ್ಯವರ್ತಿ ಸ್ಥಳದಲ್ಲಿ ಖಾಯಂ ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸುವ ತುರ್ತು ಅಗತ್ಯತೆ ಕಂಡು ಬರತೊಡಗಿದೆ.
ರಾಮನಗುಳಿಯಿಂದ ಬಾಳೆಗುಳಿ ಕ್ರಾಸ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ಅಪಘಾತ ವಲಯಗಳಿದ್ದು, ಪ್ರತಿ ವರ್ಷ ಹಲವಾರು ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಲೇ ಇರುತ್ತವೆ. ತುರ್ತು ಸೇವೆಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಇಲ್ಲಿನ ಬಹುತೇಕ ಪ್ರದೇಶದ ವ್ಯಾಪ್ತಿಯಲ್ಲಿ ಮೊಬೈಲ್ ಸಂಪರ್ಕ ಸಿಗುವುದು ಕಷ್ಟ, ಅಂಕೋಲಾದಿಂದ ಅಂಬುಲೆನ್ಸ್ ಬಂದು ಗಾಯಾಳುಗಳಿಗೆ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಪ್ರಾಣಕ್ಕೆ ಅಪಾಯ ಸಂಭವಿಸಿರುತ್ತದೆ. ಈ ರಾಷ್ಟ್ರೀಯ ಹೆದ್ದಾರಿ 63 ಮೂಲಕ ಮಾಸ್ತಿಕಟ್ಟೆ ಹೊಸಕಂಬಿ ಹಿಲ್ಲೂರ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆ ಸಹ ಇದ್ದು ಅಲ್ಲಿ ಸಹ ಅಪಘಾತಗಳು ಸಂಭವಿಸುತ್ತಲೇ ಇರುವುದು ಸಾಮಾನ್ಯವಾಗಿದೆ. ಈ ಹೆದ್ದಾರಿ ಮಧ್ಯವರ್ತಿ ಸ್ಥಳದಲ್ಲಿಯೇ ಒಂದು ಕಡೆ ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದರೆ ಗಂಭೀರ ಸ್ಥಿತಿಯಲ್ಲಿ ಇದ್ದವರಿಗೆ ಬೇಗ ಆಸ್ಪತ್ರೆಗೆ ಸೇರಿಸಿ ತುರ್ತು ಸೇವೆ ನೀಡಬಹುದಾಗಿದೆ.
ಜನ ಪ್ರತಿನಿಧಿಗಳು ಗಮನಿಸಲಿ: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳು ಲಭ್ಯವಿಲ್ಲದೇ ಹಲವಾರು ಜನರು ಮಣಿಪಾಲ, ಮಂಗಳೂರು ಸಾಗಿಸುವ ದಾರಿಯಲ್ಲಿ ಪ್ರಾಣ ಕಳೆದುಕೊಳ್ಳುವಂತ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಕೇಳಿ ಬರುತ್ತಲೇ ಇವೆ. ಅಪಘಾತ ನಡೆಯುವ ಸ್ಥಳಗಳಲ್ಲಿ ಆಂಬ್ಯುಲೆನ್ಸ್‌ನಂತ ಅಗತ್ಯ ಸೇವೆಗಳು ವಿಳಂಬವಿಲ್ಲದೇ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಜೀವ ರಕ್ಷಣೆಗೆ ಪರದಾಟ: ಕೆಲ ದಿನಗಳ ಹಿಂದಷ್ಟೆ ಇಲ್ಲಿನ ಹೆಬ್ಬುಳ್ಳ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದಾಗ ಗಂಭೀರ ಗಾಯಗೊಂಡ ಧಾರವಾಡ ಮೂಲದ ಯುವಕನನ್ನು ರಕ್ಷಿಸಲು ಆತನ ಸ್ನೇಹಿತರು ಪರದಾಟ ನಡೆಸಿದ್ದಾರೆ. ಈ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗದ ಕಾರಣ ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಸಾಧ್ಯವಾಗದೇ ರಸ್ತೆಯಲ್ಲಿ ಸಾಗುತ್ತಿದ್ದ ಆಂಧ್ರದ ವ್ಯಕ್ತಿಯೊಬ್ಬರ ಬೈಕ್ ಮೇಲೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಒಂದು ವಾರದ ಹಿಂದೆ ಕಂಚಿನಬಾಗಿಲ್ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಸಹ ಅಂಕೋಲಾದಿಂದ ಆಂಬ್ಯುಲೆನ್ಸ್ ಬರುವುದು ತಡವಾಗುತ್ತದೆ ಎಂದು ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಪಘಾತವಾದ ಸಂದರ್ಭದಲ್ಲಿ ಹೆಚ್ಚಿನ ಜನರು ತಮ್ಮ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕುವುದರಿಂದ ಗಾಯಾಳುಗಳ ಜೀವ ರಕ್ಷಣೆಗೆ ಕುಟುಂಬದವರ, ಸ್ಥಳೀಯರ ಪರದಾಟ ನಡೆಯುತ್ತಲೇ ಇರುತ್ತಿದ್ದು ರಾಮನಗುಳಿಯಿಂದ ಬಾಳೇಗುಳಿ ನಡುವೆ ಒಂದು ಸ್ಥಳದಲ್ಲಿ ಖಾಯಂ ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಿದರೆ ಪರದಾಟ ತಪ್ಪಿಸಬಹುದು.