ಉಡುಪಿ: ಕೋವಿಡ್ -19 ಮಹಾಮಾರಿಯಿಂದ ಸಾರ್ವಜನಿಕರನ್ನೆಲ್ಲರೂ ಸುರಕ್ಷಿತವಾಗಿರಲು ಶ್ರಮಿಸುತ್ತಿರುವ ಅನೇಕರಲ್ಲಿ 108 ಆ್ಯಂಬುಲೆನ್ಸ್ ವಾಹನ ಚಾಲಕ, ಸಿಬಂದಿ ಪಾತ್ರ ಬಹುಮುಖ್ಯ.
ಮನೆಯವರ ಮುಖವನ್ನೂ ನೋಡದೆ ಆಂಬ್ಯುಲೆನ್ಸ್ ಚಾಲಕರು ಕೆಲಸದಲ್ಲಿ ನಿರತರಾಗಿದ್ದು, ಕೋವಿಡ್ -19 ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿದ್ದಾರೆ.
ಉಡುಪಿ ಜಿಲ್ಲೆ ಈಗಾಗಲೇ ಕೋವಿಡ್ -19 ಮುಕ್ತವಾದರೂ ಕೋವಿಡ್ 19 ಲಕ್ಷಣ ಇರುವವರ ಕೋವಿಡ್- 19 ಸಹಾಯವಾಣಿ, ಕೋವಿಡ್-19 ಹೆಲ್ಪ್ ಲೈನ್‌ಗಳಿಗೆ ಕರೆಗಳು ಬರುತ್ತಿದ್ದು, ಶಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸಗಳಲ್ಲಿ ಈ 108 ಆ್ಯಂಬುಲೆನ್ಸ್ ಸಿಬಂದಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಸುರಕ್ಷಾ ಕ್ರಮ ಶಂಕಿತ, ಸೋಂಕಿತರ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿದ ತತ್‌ಕ್ಷಣ ಎಲ್ಲ ಸಿಬಂದಿ ಸ್ಯಾನಿಟೈಜರ್‌ಗಳನ್ನು ಉಪಯೋಗಿಸುತ್ತಾರೆ. ಕೈತೊಳೆದು ಶುಚಿತ್ವ ಗೊಳ್ಳುವ ಮತ್ತು ಸುರಕ್ಷತೆಗಾಗಿ ಧರಿಸಿರುವ ಪಿಪಿಇ ಕಿಟ್‌ಗಳನ್ನು ಜಿಲ್ಲಾಸ್ಪತ್ರೆಗೆ ಮರಳಿಸಿ ವಿಲೇವಾರಿ ಮಾಡಲಾಗುತ್ತದೆ. ಇಡೀ ಆ್ಯಂಬುಲೆನ್ಸ್‌ಗಳನ್ನು ಫೀಮಿಗೇಷನ್(ಸ್ಯಾನಿಟೈಸರ್ ಸಿಂಪಡನೆ)ಮೂಲಕ ಶುಚಿಗೊಳಿಸಲಾಗುತ್ತದೆ ಎಂದು 108 ಉಡುಪಿಯ ತುರ್ತು ವೈದ್ಯಕೀಯ ತಜ್ಞ ಸಂತೋಷ್ ತಿಳಿಸಿದ್ದಾರೆ.ಎಲ್ಲ 108ರ ಸಿಬಂದಿಗಳು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿತ ಸಹ ಸುರಕ್ಷಾ ಪರಿಕರ ಒದಗಿಸಿದೆ.
ಪ್ರತ್ಯೇಕ 3 ಆ್ಯಂಬ್ಯುಲೆನ್ಸ್
ಕೋವಿಡ್- 19 ಪ್ರಕರಣಗಳಿಗೆಂದೇ ಜಿಲ್ಲೆಯಲ್ಲಿ 3 ಪ್ರತ್ಯೇಕ ಆ್ಯಂಬುಲೆನ್ಸ್ ಗಳನ್ನು ಕಾಯ್ದಿರಿಸಲಾಗಿದೆ. ಉಡುಪಿ ತಾಲೂಕಿಗೆ ಮಲ್ಪೆ, ಕುಂದಾಪುರದ ಗಂಗೊಳ್ಳಿ ಮತ್ತು ಕಾರ್ಕಳದಲ್ಲಿ ತಲಾ 1ರಂತೆ ಒಟ್ಟು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದೆ. ಒಂದು ಆ್ಯಂಬುಲೆನ್ಸ್‌ನಲ್ಲಿ ಪೈಲೆಟ್ (ಡ್ರೈವರ್), ತುರ್ತು ವೈದ್ಯಕೀಯ ತಜ್ಞರು ಸೇರಿ ಒಟ್ಟು ನಾಲ್ಕು ಮಂದಿ ಇರುತ್ತಾರೆ. ಒಟ್ಟು 3 ತಾಲೂಕಿನ ಆ್ಯಂಬ್ಯುಲೆನ್ಸ್‌ಗಳಲ್ಲಿ 12 ಮಂದಿ ಸಿಬಂದಿ ಇದ್ದಾರೆ. ಉಡುಪಿ ತಾಲೂಕಿನ ಆಂಬುಲೆನ್ಸ್ ಸಿಬಂದಿ ಇಲ್ಲಿಯವರೆಗೆ 60ಕ್ಕೂ ಹೆಚ್ಚಿನ ದೂರುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಂದಾಪುರದಲ್ಲಿ 20 ಹಾಗೂ ಕಾರ್ಕಳ ತಾಲೂಕಿನಿಂದ ಬಂದ 10 ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.