Advertisement

ಕುಂದಾಪುರ ಭಾಗಕ್ಕೆ ಮೀಸಲಾಗುತ್ತಿದೆ ಕೋಟದ 108 ಆ್ಯಂಬುಲೆನ್ಸ್‌

12:12 AM Nov 27, 2019 | Team Udayavani |

ಕೋಟ: ಕೋಟ ಹೋಬಳಿ ಸುತ್ತಮುತ್ತ ಸಂಭವಿಸುವ ಅಪಘಾತ, ಅನಾರೋಗ್ಯ ಮುಂತಾದ ಪ್ರಕರಣಗಳಲ್ಲಿ ತುರ್ತು ಸೇವೆ ನೀಡುವ ಸಲುವಾಗಿ 108 ಸರಕಾರಿ ಆ್ಯಂಬುಲೆನ್ಸ್‌ ಹಲವು ವರ್ಷದಿಂದ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದೀಗ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ 108 ಸೌಲಭ್ಯ ವಿಲ್ಲದಿರುವುದರಿಂದ ಗಂಭೀರ ಪ್ರಕರಣದ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಕೋಟದ ಆ್ಯಂಬುಲೆನ್ಸ್‌ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕೋಟದಲ್ಲಿ ತುರ್ತು ಸಂದರ್ಭ ಆ್ಯಂಬುಲೆನ್ಸ್‌ ಸೇವೆಗೆ ಸಿಗುತ್ತಿಲ್ಲ ಮತ್ತು ಖಾಸಗಿ ಆ್ಯಂಬ್ಯುಲೆನ್ಸ್‌ ಗಳನ್ನೇ ಅವಲಂಬಿಸಬೇಕಾಗುತ್ತದೆ.

Advertisement

ವಿಶಾಲವಾದ ವ್ಯಾಪ್ತಿ
ಕೋಟದಲ್ಲಿ ಕಾರ್ಯನಿರ್ವಹಿಸುವ 108 ಆ್ಯಂಬುಲೆನ್ಸ್‌ ಐರೋಡಿ, ಪಾಂಡೇಶ್ವರ, ಕೋಡಿ, ಸಾಲಿಗ್ರಾಮ ಪ.ಪಂ. ಹಾಗೂ ಕೋಟ, ಕೋಟತಟ್ಟು, ತೆಕ್ಕಟ್ಟೆ, ಬೇಳೂರು, ಕೆದೂರು, ವಡ್ಡರ್ಸೆ, ಯಡ್ತಾಡಿ, ಶಿರಿಯಾರ, ಬಿಲ್ಲಾಡಿ ಗ್ರಾ.ಪಂ.ನ ವಿಶಾಲ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಹೀಗಾಗಿ ತುರ್ತು ಸಂದರ್ಭ ಆ್ಯಂಬುಲೆನ್ಸ್‌ ಸೇವೆ ಸಿಗದಿರುವುದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಸೇವೆ ಸಿಗದೆ ಜೀವಹಾನಿ
ಇತ್ತೀಚೆಗೆ ಕೋಟ ಹೈಸ್ಕೂಲ್‌ ಸಮೀಪ ಅಪಘಾತವೊಂದರಲ್ಲಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾಗ 108ಕ್ಕೆ ಕರೆ ಮಾಡಲಾಗಿತ್ತು. ಆದರೆ ಆ್ಯಂಬುಲೆನ್ಸ್‌ ಆಗ ಕುಂದಾಪುರ ಭಾಗದ ಸೇವೆಯಲ್ಲಿತ್ತು ಹಾಗೂ ಖಾಸಗಿ ಆ್ಯಂಬುಲೆನ್ಸ್‌ ಕೂಡ ಸಿಕ್ಕಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸುವುದು ತಡವಾಗಿ ಗಾಯಾಳು ಮೃತಪಟ್ಟಿದ್ದ.

ಇದೇ ರೀತಿ ಹಲವು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್‌ ಸೇವೆಗೆ ಸಿಗುತ್ತಿಲ್ಲ. ಆದ್ದರಿಂದ ಕುಂದಾಪುರ ತಾಲೂಕು ಆಸ್ಪತ್ರೆಗೆ ಪ್ರತ್ಯೇಕ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ ಕೇವಲ ಕೋಟ ಭಾಗಕ್ಕೆ ಮೀಸಲಿರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಸಾರ್ವಜನಿಕರಿಂದ ಮನವಿ
ಕೋಟದ 108 ಆ್ಯಂಬುಲೆನ್ಸ್‌ ಕುಂದಾಪುರ ತಾಲೂಕು ಆಸ್ಪತ್ರೆಗೆ ಸಂಬಂಧಿಸಿದ ಸೇವೆಯಲ್ಲೇ ಹೆಚ್ಚು ತೊಡಗುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಆದರೆ 108 ಆ್ಯಂಬುಲೆನ್ಸ್‌ ಸೇವೆ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಸಂಬಂಧಪಟ್ಟ ಮುಖ್ಯಸ್ಥರಿಗೆ ಮನವಿ ಮಾಡುವಂತೆ ತಿಳಿಸಿದ್ದೇನೆ.
-ಡಾ| ವಿಶ್ವನಾಥ, ವೈದ್ಯಾಧಿಕಾರಿಗಳು ಕೋಟ ಸ.ಆರೋಗ್ಯ ಕೇಂದ್ರ

Advertisement

ಕೋಟಕ್ಕೆ ಸೀಮಿತವಾಗಿರಲಿ
ಕುಂದಾಪುರ ಸರಕಾರಿ ಆಸ್ಪತ್ರೆಗೆ 108ರ ಅವಶ್ಯಕತೆ ಇದೆ. ಆದ್ದರಿಂದ ಅಲ್ಲಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿ ಕೋಟಕ್ಕೆ ಮೀಸಲಾಗಿಡಬೇಕು. ಈ ಕುರಿತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಸಂಬಂಧಪಟ್ಟವರು ಈ ಕುರಿತು ಕ್ರಮಕೈಗೊಳ್ಳಬೇಕು.
-ರಂಜಿತ್‌ ಬಾರಿಕೆರೆ, ಸ್ಥಳೀಯರು

- ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next