Advertisement

ಪ್ರಾಣ ಪಣಕ್ಕಿಟ್ಟವರಿಗೆ ಸಿಗುತ್ತಿಲ್ಲ ಬೆವರಿನ ಹಣ! 108 ಸಿಬಂದಿಗೆ 3 ತಿಂಗಳಿಂದ ಸಂಬಳವಿಲ್ಲ

01:38 AM Mar 27, 2022 | Team Udayavani |

ಕಾರ್ಕಳ: ಪ್ರಾಣವನ್ನೇ ಪಣಕ್ಕಿಟ್ಟು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ 108 ಆರೋಗ್ಯಕವಚ ಸಿಬಂದಿಗೆ 3 ತಿಂಗಳಿಂದ ವೇತನ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಔಷಧ ಖರೀದಿ, ಮಕ್ಕಳ ಶಿಕ್ಷಣ ಇತ್ಯಾದಿಗೂ ಪರದಾಡುವ ಸ್ಥಿತಿ ಅವರ ಕುಟುಂಬದ್ದಾಗಿದೆ.

Advertisement

ಆರೋಗ್ಯ ಇಲಾಖೆಯಿಂದ ಗುತ್ತಿಗೆ ಪಡೆದುಕೊಂಡಿರುವ ಜಿವಿಕೆ ಇಎಂಎಆರ್‌ಐ ಸಂಸ್ಥೆ ತನ್ನ ಸಿಬಂದಿಗೆ ಡಿಸೆಂಬರ್‌ನಿಂದ ಬಿಡಿಗಾಸನ್ನೂ ನೀಡಿಲ್ಲ. ಮಾಸಿಕ ವೇತನವನ್ನೇ ನಂಬಿರುವ 108ರ ಸಿಬಂದಿ ಅತ್ತ ಕೆಲಸವನ್ನು ನಿಲ್ಲಿಸಲೂ ಸಾಧ್ಯವಾಗದೆ ಇತ್ತ ಬದುಕಿನ ಬಂಡಿಯನ್ನು ಚಲಾಯಿಸಲೂ ಸಾಧ್ಯವಾಗದೆ ಸಾಲಸೋಲ ಮಾಡಿ ಒದ್ದಾಡುತ್ತಿದ್ದಾರೆ.

ಬಡವಾದ ಸಿಬಂದಿ
ಸರಕಾರ ಈ ಹಿಂದೆಲ್ಲ ಮುಂಗಡ ಹಣ ನೀಡುತ್ತಿತ್ತು. ಈಗ ಕೊಡದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಜಿವಿಕೆ ಸಂಸ್ಥೆ ಹೇಳುತ್ತಿದೆ. ಆದರೆ ಜಿವಿಕೆ ಸಂಸ್ಥೆಯವರು ಸರಿಯಾದ ದಾಖಲೆಗಳನ್ನು ನೀಡದೆ ಇರುವುದರಿಂದ ಸರಕಾರ ಹಣ ಮಂಜೂರಾತಿಗೆ ಹಿಂದೇಟು ಹಾಕುತ್ತಿದೆ; ಸಂಸ್ಥೆಯು ನಿರ್ವಹಣೆಯಲ್ಲಿ ಎಡವಿದ್ದೇ ಸಮಸ್ಯೆಗೆ ಕಾರಣ ಎನ್ನುತ್ತಾರೆ ಸಿಬಂದಿ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂತೆ ಇಲ್ಲಿ ಸಂಸ್ಥೆ ಮತ್ತು ಸರಕಾರದ ಗುದ್ದಾಟಕ್ಕೆ ನಾವು ಬಲಿಯಾಗುತ್ತಿದ್ದೇವೆ ಎಂದು ಸಿಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

108 ಆರೋಗ್ಯ ಕವಚದ ನಿರ್ವಹಣೆಗಾಗಿ ಜಿವಿಕೆ ಸಂಸ್ಥೆಗೆ 10 ವರ್ಷಗಳ ಗುತ್ತಿಗೆ ನೀಡಲಾಗಿತ್ತು. 2017ರ ವರೆಗೆ ಚೆನ್ನಾಗಿಯೇ ನಡೆಯುತ್ತಿತ್ತು. ಪ್ರತೀ ತಿಂಗಳ ಮೊದಲ ಒಂದೆರಡು ದಿನಗಳಲ್ಲಿ ವೇತನ ಪಾವತಿಯಾಗುತ್ತಿತ್ತು. 2017ರಲ್ಲಿ ಸಮಸ್ಯೆ ಆರಂಭವಾಗಿದ್ದು, ಆಗಾಗ ಮರುಕಳಿಸುತ್ತಿದೆ.

ಹೊಸ ಟೆಂಡರ್‌ಗೆ ನಿರ್ಧಾರ
ಜಿವಿಕೆಯ ಗುತ್ತಿಗೆ ಅವಧಿ 2018ಕ್ಕೆ ಮುಗಿದಿದೆ. ಆದರೂ ಈ ವರೆಗೆ ಅವರನ್ನೇ ಮುಂದುವರಿಸಲಾಗಿತ್ತು. ಇತ್ತೀಚೆಗೆ ಜಿವಿಕೆ ಕುರಿತು ಹಲವು ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಐದು ವರ್ಷಗಳ ಅವಧಿಗೆ ಹೊಸದಾಗಿ ಟೆಂಡರ್‌ ಕರೆಯಲು ಸರಕಾರ ನಿರ್ಧರಿಸಿದೆ. ಸೊರಗಿದ 108 ಆ್ಯಂಬುಲೆನ್ಸ್‌ ಸೇವೆಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿ ನಾಲ್ಕು ವರ್ಷಗಳಿಂದ ಕಾಯುತ್ತಿದ್ದು, ಸಂಪುಟದ ಅನುಮತಿ ಸಿಗದೆ ಬಾಕಿಯಾಗಿತ್ತು. ಈ ಅನುಮತಿ ಲಭಿಸಿದೆ.

Advertisement

ವಿತ್ತ ವರ್ಷದ ಕೊನೆಯ ತಿಂಗಳಾಗಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಸರಕಾರದಿಂದ ಹಣ ಬಿಡುಗಡೆಯಾಗಿದೆ. ಈ ಕೂಡಲೇ ಒಂದು ತಿಂಗಳ ವೇತನ ಪಾವತಿಸುತ್ತೇವೆ. ಬಾಕಿ ಮೊತ್ತವನ್ನು ವಾರದೊಳಗೆ ನೀಡಲಿದ್ದೇವೆ‌.
– ಹನುಮಂತಪ್ಪ,,
ಸಿಇಒ ಜಿವಿಕೆ ಇಎಂಎಆರ್‌ಐ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next