Advertisement

ಶತಮಾನೋತ್ಸವ ಆಚರಣೆಯ ಸಿದ್ಧತೆಯಲ್ಲಿರುವ ತಾಲೂಕು ಕೇಂದ್ರದ ಶಾಲೆ

07:54 PM Nov 30, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬೈಂದೂರು: ನವ್ಯ ಸಾಹಿತ್ಯದ ಮುಂಗೋಳಿ ಗೋಪಾಲಕೃಷ್ಣ ಅಡಿಗರು ಓದಿದ ಬೈಂದೂರು ಮಾದರಿ ಶಾಲೆ ಈ ವರ್ಷ ಶತಮಾನೋತ್ಸವ ಆಚರಣೆಯ ಸಿದ್ಧತೆಯಲ್ಲಿದೆ. 107 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ಶಾಲೆ ತಾಲೂಕು ಕೇಂದ್ರದ ಹೃದಯ ಭಾಗದಲ್ಲಿದ್ದು, ಕೇವಲ ಬೈಂದೂರು ಮಾತ್ರವಲ್ಲದೆ ಇತರ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಮುಖ್ಯವಾಗಿ ಈ ಶಾಲೆಯಲ್ಲಿ ಉತ್ತರ ಕರ್ನಾಟಕದ ಮಕ್ಕಳು ಕೂಡ ಅಭ್ಯಾಸ ಮಾಡುತ್ತಿದ್ದಾರೆ.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇರುವ ಏಕೈಕ ಶಾಸಕರ ಮಾದರಿ ಶಾಲೆ ಇದಾಗಿದೆ. ಫಲಕದಲ್ಲಿ ಶಾಸಕರ ಮಾದರಿ ಶಾಲೆ ಎಂದಿದ್ದರೂ ಯಾವುದೇ ದಾಖಲೆ, ಮೊಹರುಗಳಲ್ಲಿ ನಮೂದಿಸುವಂತಿಲ್ಲ. 1ರಿಂದ 5ರ ವರೆಗೆ ಕನ್ನಡ ಮಾಧ್ಯಮ, 6ರಿಂದ 8ರ ವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಿವೆ. 17 ಕೊಠಡಿಗಳಿದ್ದು 11 ಜನ ಶಿಕ್ಷಕರಿದ್ದಾರೆ. 2 ಬಾವಿ ಇದ್ದರೂ ಬೇಸಗೆಯಲ್ಲಿ ನೀರಿನ ಕೊರತೆಯಿದೆ. ಸುಸಜ್ಜಿತ ಗ್ರಂಥಾಲಯ ಹೊಂದಿದ್ದು ಗಣಕ ಯಂತ್ರಗಳು ಇಲ್ಲದಿರುವುದು ಶೈಕ್ಷಣಿಕ ಪ್ರಗತಿಗೆ ಕೊರತೆಯಾಗಿದೆ.

ಶಾಸಕರ ಮಾದರಿ ಶಾಲೆಯ ಹಿನ್ನೆಲೆ
1912ರಲ್ಲಿ ಕಿ.ಪ್ರಾ. ಶಾಲೆಯಾಗಿ ಆರಂಭ. 1918ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡು ಹೊಂದಿದೆ. ಆರಂಭದಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಪ್ರಸ್ತುತ 275 ಮಕ್ಕಳು ಓದುತ್ತಿದ್ದಾರೆ. ಈಶ್ವರ ದೇವಸ್ಥಾನದ ಮಹಡಿ ಮೇಲೆ ಆರಂಭವಾಗಿ ಬಳಿಕ ಪಂಚಾಯತ್‌ ಕಚೇರಿಯಲ್ಲಿ ಶಾಲೆ ಕಾರ್ಯನಿರ್ವಹಿಸಿತ್ತು.ಹೊಳ್ಳರ ಮನೆತನದವರು ಶಾಲೆಗೆ ಭೂಮಿ ದಾನ ನೀಡಿದ್ದು ಪ್ರಸ್ತುತ ಪಹಣಿಯಲ್ಲಿ ಸರಕಾರ ಎಂದು ನಮೂದಾಗಿದೆ. ಶಾಲೆಗೆ 94 ಸೆಂಟ್ಸ್‌ ಜಾಗ ಇದೆ. ಶಾಲೆಯನ್ನು ಎಮ್ಮೆ ಹೊಂಡ ಎಂದು ಕೂಡ ಕರೆಯುತ್ತಾರೆ. ಆರಂಭದಲ್ಲಿ ಹೆಣ್ಣು ಮಕ್ಕಳ ಶಾಲೆ ಇದಾಗಿತ್ತು.

ಸಿದ್ಧತೆ
ಕಳೆದೊಂದು ವರ್ಷದಿಂದ ಅದ್ದೂರಿ ಶತಮಾನೋತ್ಸವ ಆಚರಿಸಬೇಕೆನ್ನುವ ಶಾಲೆಯ ಕನಸಿಗೆ ಈ ವರ್ಷ ಕಾಲ ಕೂಡಿಬಂದಿದೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಶತಮಾನೋತ್ಸವ ಆಚರಣೆಗೆ ಸಿದ್ಧತೆೆ ನಡೆಯುತ್ತಿದೆ. ಹಳೆ ವಿದ್ಯಾರ್ಥಿಗಳು ಕೂಡ ಉತ್ತಮ ಸಹಕಾರ ನೀಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಹುಬ್ಬಳ್ಳಿ ಉದ್ಯಮಿಯೋರ್ವರು 5 ಲಕ್ಷ ರೂ. ವೆಚ್ಚದ ಸಭಾಭವನ ನಿರ್ಮಿಸಿ ಕೊಟ್ಟಿದ್ದಾರೆ. ಮತ್ತೋರ್ವ ದಾನಿಗಳು ಶಾಲೆಯ ಗೇಟ್‌ ಕೊಡುಗೆ ನೀಡಿದ್ದಾರೆ. ಉಳಿದಂತೆ ಅನೇಕ ದಾನಿಗಳು ಉತ್ತಮ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಆಯೋಜನೆಯಲ್ಲಿ ಅನೇಕ ಕಾರ್ಯಕ್ರಮ ನಡೆಯುತ್ತಿದೆ.

Advertisement

ಅಗಸ್ತ ಫೌಂಡೇಶನ್‌ ವತಿಯಿಂದ ವಿಜ್ಞಾನ ಕೇಂದ್ರ ಆರಂಭಿಸಲಾಗಿದೆ. ಇಲಾಖಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸೈಕಲ್‌ ಕೊಡುಗೆ, ಸಮವಸ್ತ್ರ ವಿತರಣೆ, ಉಚಿತ ಪಠ್ಯ ಪುಸ್ತಕ, ಬಿಸಿಯೂಟ ಸಮರ್ಪಕವಾಗಿ ನಡೆದಿದೆ.ಮಂಗಳೂರಿನ ಸಂಸ್ಥೆಯೊಂದು ಶೌಚಾಲಯಗಳ ನವೀಕರಣದ ಜವಾಬ್ದಾರಿ ವಹಿಸಿಕೊಂಡಿದೆ.

ಬೈಂದೂರು ವ್ಯಾಪ್ತಿಯಲ್ಲಿ ಶಾಸಕರ ಮಾದರಿ ಶಾಲೆ ಎನ್ನುವ ಹೆಗ್ಗಳಿಕೆ ಈ ಶಾಲೆಗೆ ಮಾತ್ರ ಇದೆ. ಅನೇಕ ಹಳೆ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.ಕೇಂದ್ರ ಭಾಗದಲ್ಲಿರುವ ಕಾರಣ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಅಭಿಲಾಷೆ ಇದ್ದು, ಶಿಕ್ಷಣಾಭಿಮಾನಿಗಳ ಸಹಕಾರದ ಭರವಸೆಯಿದೆ.
-ಜನಾರ್ದನ ದೇವಾಡಿಗ, ಮುಖ್ಯೋಪಾಧ್ಯಾಯರು

ಶತಮಾನೋತ್ಸವದ ಸಂಭ್ರಮದಲ್ಲಿರುವ ಈ ಶಾಲೆಗೆ ದಾನಿಗಳ ಸಹಕಾರ ಅತ್ಯವಶ್ಯವಾಗಿದೆ.ಈಗಾಗಲೇ ಹಲವು ಸಭೆಗಳನ್ನು ಕರೆಯಲಾಗಿದೆ. ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಹಾಗೂ ಎಲ್ಲರ ಸಹಕಾರ ಶಾಸಕರ ಮಾರ್ಗದರ್ಶನದಲ್ಲಿ ಶತಮಾನೋತ್ಸವ ಆಚರಿಸುವ ಚಿಂತನೆಯಿದೆ.
-ನಾಗರಾಜ ಗಾಣಿಗ,
ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ

-ಅರುಣ್‌ ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next