ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ ಸೋಂಕು ವ್ಯಾಪಿಸುತ್ತಿರುವಂತೆಯೇ ಚೇತರಿಸಿಕೊಂಡಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಕೋವಿಡ್ ಸೋಂಕು ಹಿರಿಯ ನಾಗರಿಕರಿಗೆ ಮತ್ತು ಉಸಿರಾಟದ ತೊಂದರೆಯಿರುವ ವ್ಯಕ್ತಿಗಳಿಗೆ ಮಾರಕ ಎಂದೇ ಹೇಳಲಾಗುತ್ತಿದೆ.
ಆದರೂ ಇಲ್ಲೊಬ್ಬರು ಶತಾಯುಷಿ ಈ ಮಾರಕ ಸೋಂಕಿಗೆ ಒಳಗಾಗಿಯೂ ಅದನ್ನು ಗೆದ್ದು ಬಂದಿದ್ದಾರೆ ಮಾತ್ರವಲ್ಲದೇ ಕೋವಿಡ್ ವೈರಸ್ ಗೆದ್ದ ದೇಶದ ಅತೀ ಹಿರಿಯ ವ್ಯಕ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಸೆಂಟ್ರಲ್ ದಿಲ್ಲಿಯ ನಿವಾಸಿ ಮುಖ್ತಾರ್ ಅಹ್ಮದ್ (106) ಎಂಬವರು ಈ ಮಾರಕ ಸೋಂಕಿನಿಂದ ಚೇತರಿಕೆ ಕಂಡ ಹಿರಿಯ ವ್ಯಕ್ತಿಯಾಗಿದ್ದಾರೆ. ಅಹ್ಮದ್ ಅವರಿಗೆ ಅವರ ಪುತ್ರನಿಂದ ಸೋಂಕು ತಗುಲಿತ್ತು. ಹೀಗಾಗಿ, ಅವರು ಎ.14ರಂದು ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಹಮ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸಂದರ್ಭದಲ್ಲಿ ಈ ಶತಾಯುಷಿ ಜೀವದಲ್ಲಿದ್ದ ರೋಗದ ವಿರುದ್ಧ ಹೋರಾಡುವ ಆತ್ಮವಿಶ‍್ವಾಸವನ್ನು ಇಲ್ಲಿನ ವೈದ್ಯರು ಗಮನಿಸಿದ್ದರು. ಮತ್ತು ಕೋವಿಡ್ ವೈರಸ್ ವಿರುದ್ಧ ಹೋರಾಡುವಲ್ಲಿ ಎಲ್ಲಕ್ಕಿಂತ ಮನೋಬಲವೇ ನಿರ್ಣಾಯಕವಾಗಿರುತ್ತದೆ.
ಮುಖ್ತಾರ್ ಅಹಮ್ಮದ್ ಅವರಲ್ಲಿ ಈ ಮನೋಬಲ ತೀವ್ರವಾಗಿದ್ದ ಕಾರಣ ಇವರಿಗೆ ಈ ಮಹಾಮಾರಿಯ ವಿರುದ್ಧ ಗೆದ್ದುಬರಲು ಸಾಧ್ಯವಾಯಿತು ಎಂಬುದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಮಾತಾಗಿದೆ.
ಮತ್ತು ಈ ಮೂಲಕ ಶತಾಯುಷಿಗಳೂ ಸಹ ಈ ಮಾರಕ ವೈರಸ್ ಬಾಧೆಗೊಳಗಾಗಿ ಬದುಕುಳಿಯಬಹುದು ಎಂಬುದಕ್ಕೆ ಅಹಮ್ಮದ್ ಅವರೊಂದು ಉತ್ತಮ ನಿದರ್ಶನವಾಗಿದ್ದಾರೆ.