ಆಳಂದ: ಗ್ರಾಮೀಣ ಭಾಗದಲ್ಲಿ ಸೌಹಾರ್ದ ಸಹಕಾರಿ ಕ್ರಾಂತಿ ಮೂಲಕ ಬಡ್ಡಿದಂಧೆಕೋರರ ಸೊಕ್ಕಡಗಿಸಿ ಜನ ಸಾಮಾನ್ಯರಿಗೆ ನೆರವಾಗಿ ಎಂದು ವಿಜಯಪುರ ನಗರ ಶಾಸಕ, ಸಿದ್ಧಶ್ರೀ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿಯ ತಾಲೂಕಿನ ಹಿರೋಳಿ ಗ್ರಾಮ ಶಾಖೆ ದಶಮಾನೋತ್ಸವ ಹಾಗೂ 2021-22ನೇ ಸಾಲಿನ 20ನೇ ವಾರ್ಷಿಕ ಮಹಾಸಭೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆ ತೀರಾ ಹಿಂದುಳಿದಿದೆ. ದಿವಾಳಿ ಅಂಚಿನಲ್ಲಿದ್ದ ಡಿಸಿಸಿ ಬ್ಯಾಂಕ್‌ಗೆ 25ಕೋಟಿ ರೂ. ಠೇವಣಿ ಇಡುವ ಮೂಲಕ ಸಿದ್ಧಶ್ರೀ ಸೌಹಾರ್ದ ಸಹಕಾರ ಮಾಡಿದೆ. ರಾಜ್ಯದಲ್ಲೇ ಇರದಷ್ಟು ಕಲಬುರಗಿ ಜಿಲ್ಲೆಯಲ್ಲಿ 1050 ಫೈನಾನ್ಸ್‌ಗಳು ಇವೆ. ಇವು ಬಡ್ಡಿದಂಧೆ ಮೂಲಕ ಜನರ ಜೀವ ಹಿಂಡುತ್ತಿವೆ. ಇಂಥ ಅಕ್ರಮ ಬಡ್ಡಿಯಿಂದ ಹೊರಬರಲು ಇಲ್ಲಿನ ಡಿಸಿಸಿ ಬ್ಯಾಂಕ್ ಮತ್ತು ಸೌಹಾರ್ದ ಕ್ಷೇತ್ರ ಬೆಳೆಯಬೇಕು ಎಂದರು.
ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ ನೇತೃತ್ವದಲ್ಲಿ ಕಳೆದ 20 ವರ್ಷಗಳಿಂದಲೂ ಸರಸಂಬಾದ ಶ್ರೀಧನಲಕ್ಷ್ಮೀ ಸೌಹಾರ್ದ ಸಹಕಾರಿ ಮೂಲಕ ನಾಲ್ಕು ಶಾಖೆಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿದ್ದು, ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಸಕ ಸುಭಾಷ ಗುತ್ತೇದಾರ, ಸಂಜೀವ ಮಹಾಜನ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ತಾಪಂ ಇಒ ವಿಲಾಸರಾಜ್, ಶ್ರಿ ಶಿವಬಸವ ಮಹಾ ಸ್ವಾಮೀಜಿ, ಸೂರ್ಯಕಾಂತ ರ್ಯಾಕಲೆ ಇದ್ದರು. ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಂತಪ್ಪ ಎಸ್. ಆಲೂರೆ ಅಧ್ಯಕ್ಷತೆ ವಹಿಸಿದ್ದರು. ಸಾಧಕರಾದ ಯೋಧ ವಿಠ್ಠಲ ವಾಡೇದ, ನಿವೃತ್ತ ಡಿವೈಎಸ್ಪಿ ಆರ್.ಸಿ.ಘಾಳೆ, ಡಾ|ಅಪ್ಪಾಸಾಬ್ ದೇಶಮುಖ, ರೈತ ರಾಮಚಂದ್ರ ಎಸ್. ಶೇರಿಕಾರ, ಶಿವಶರಣಪ್ಪ ಚೌಡೇಶ್ವರಿ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆದ ವಿದ್ಯಾಥಿಗಳಿಗೆ 10 ಸಾವಿರ ರೂ. ಪ್ರೋತ್ಸಾಹಧನ ಮತ್ತು ಮರಣ ಹೊಂದಿದ ಸೌಹಾರ್ದ ಸದಸ್ಯರ ಕುಟುಂಬಗಳಿಗೆ 15 ಮಂದಿಗೆ 75 ಸಾವಿರ ರೂ. ಮರಣಾಂತರ ನಿಧಿ ಮತ್ತು ಧನಲಕ್ಷ್ಮೀ ಜೀವನ ಸುರಕ್ಷಾ ಯೋಜನೆ ಅಡಿ 11ಮಂದಿಗೆ 2.25 ಲಕ್ಷ ರೂ. ಚೆಕ್ ನೀಡಲಾಯಿತು. ಲೇಖಕರಾದ ನಾಗೇಂದ್ರ ಶಿ. ಚಿಕ್ಕಳ್ಳಿ ಮತ್ತು ಸುಜಾತ ನಾ. ಚಿಕ್ಕಳ್ಳಿ ದಂಪತಿಗಳ ಸಮಾಜ ವಿಜ್ಞಾನ ಬೋಧನಾ ಶಾಸ್ತ್ರದ ತಿಳಿವಳಿಕೆ ಮತ್ತು ಶಿಸ್ತು ಕುರಿತಾದ ಕೃತಿಯನ್ನು ಶಾಸಕ ಯತ್ನಾಳ ಬಿಡುಗಡೆಗೊಳಿಸಿದರು.
ಆಡಳಿತ ಮಂಡಳಿ ನಿರ್ದೇಶಕರು ಮತ್ತು ವಿವಿಧ ಶಾಖೆ ಸದಸ್ಯರು, ಗ್ರಾಮಸ್ಥರು ಇದ್ದರು. ಸೋಮನಾಥ ನಿಂಬರಗಿ ವರದಿ ಮಂಡಿಸಿದರು. ಯೋಗಿರಾಜ ಮಾಡ್ಯಾಳೆ,ಬಸವರಾಜ ಎಂ. ಬೆಳಮಗಿ ನಿರೂಪಿಸಿದರು. ಸೋಮನಿಂಗ ಕವಲಗಿ ಸ್ವಾಗತಿಸಿದರು. ಬಸವರಾಜ ಕೊರಳ್ಳಿ ವಂದಿಸಿದರು.