ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ 2020-21ನೇ ಸಾಲಿನ 1036 ಕೋಟಿ ರೂ. ಆಯವ್ಯಯವನ್ನು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಶುಕ್ರವಾರ ಮಂಡಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅಧ್ಯಕ್ಷೆ, ಈ ಕರಡು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ. ಈ ವರ್ಷ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೇತರ ಲೆಕ್ಕ ಶೀರ್ಷಿಕ ಎಂಬ ಪ್ರತ್ಯೇಕ ವಿಂಗಡಣೆ ಇಲ್ಲ ಎಂದು ತಿಳಿಸಿದರು.
ಜಿಪಂ ಕಾರ್ಯಕ್ರಮಗಳಿಗೆ 315.44 ಕೋಟಿ, ತಾಪಂ ಕಾರ್ಯಕ್ರಮಗಳಿಗೆ 720.31 ಕೋಟಿ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ 66 ಲಕ್ಷ ಒದಗಿಸಲಾಗಿದೆ. ತಾ.ಪಂ.ಗಳಿಗೆ 2019-20ನೇ ಸಾಲಿಗಿಂತ 2020-21 ರಲ್ಲಿ 6475.42 ಲಕ್ಷ ಹೆಚ್ಚಿನ ಅನುದಾನ ನೀಡಲಾಗಿದೆ. 2020-21ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆ ಅಡಿ ವಿವಿಧ ಇಲಾಖೆಗಳು, ತಾಪಂ ಹಾಗೂ ಗ್ರಾಪಂ ಅನುದಾನ ನಿಗದಿ ಮಾಡಲಾದ ಮೊತ್ತವನ್ನು ಅಧ್ಯಕ್ಷರು ವಿವರಿಸಿದರು.
ಜಿಪಂ ಹಾಗೂ ಅಧಿಧೀನ ಇಲಾಖೆಗಳ ಸಿಬ್ಬಂದಿ ವೇತನಕ್ಕೆ 101.17 ಕೋಟಿ, ಹೊರ ಗುತ್ತಿಗೆ ನೌಕರರ ವೇತನಕ್ಕೆ 80.8 ಕೋಟಿ, ದಿನಗೂಲಿ ನೌಕರರ ವೇತನಕ್ಕೆ 77.04 ಲಕ್ಷ ಹಾಗೂ ಕಚೇರಿ ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ 205.40 ಕೋಟಿ ವಿಂಗಡಿಸಲಾಗಿದೆ ಎಂದು ಜಯಶ್ರೀ ಮೊಗೇರ ವಿವರಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣಕ್ಕೆ 14739.06 ಲಕ್ಷ ಒದಗಿಸಲಾಗಿದೆ. ಅಕ್ಷರ ದಾಸೋಹ, ಪೌಷ್ಟಿಕ ಆಹಾರಕ್ಕೆ ಎರಡೂ ಶೈಕ್ಷಣಿಕ ಜಿಲ್ಲೆಗಳಿಗೆ 5763.03 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. 2020-21 ಆಯವ್ಯಯಕ್ಕೆ ಅನುಮೋದನೆ ನೀಡಲು ಸದಸ್ಯರಲ್ಲಿ ವಿನಂತಿಸಿದರು. ಸುದೀರ್ಘ ಚರ್ಚೆ ನಂತರ ಸದಸ್ಯರು ಬಜೆಟ್‌ಗೆ ಅನುಮೋದನೆ ನೀಡಿದರು.
ಟೀಕೆ-ಪ್ರಶಂಸೆ: ಕೋವಿಡ್ ವಿರುದ್ಧ ಹೋರಾಡುತ್ತಿರುವವರ ಕುರಿತು ಜಿಪಂ ಸದಸ್ಯರಿಂದ ಶ್ಲಾಘನೆ ವ್ಯಕ್ತವಾಯಿತು. ಅಧಿಕಾರಿಗಳು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಕೆಲ ಸದಸ್ಯರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲ ಸದಸ್ಯರು ಅಧಿಕಾರಿಗಳ ವರ್ತನೆ ಟೀಕಿಸಿದರು. ಜಿಪಂ ಸಿಇಒ ಎಂ. ರೋಶನ್ ಭಟ್ಕಳ ಆಸ್ಪತ್ರೆಗೆ ಭೇಟಿ ನೀಡಿ ಬಂದ ಬಗ್ಗೆ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.
ಸದಸ್ಯ ಅಲ್ಬರ್ಟ್ ಡಿಕೋಸ್ಟಾ ಮಾತನಾಡಿ ಭಟ್ಕಳದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಿರಲಿಲ್ಲ. ಆಗಿದ್ದರೆ ಇಷ್ಟು ದಿನ ಲಾಕ್‌ಡೌನ್ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಅಲ್ಲಿ ಜಿಪಂ ಸದಸ್ಯರಿಗೆ ಪ್ರವೇಶ ಇರಲಿಲ್ಲ ಎಂದು ಆರೋಪಿಸಿದರು. ಸದಸ್ಯ ಜಿ.ಎನ್. ಹೆಗಡೆ ಮುರೇಗಾರ ಮಾತನಾಡಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ನೀಡಿದೆ. ಇದರಲ್ಲಿ ನಮ್ಮ ಜಿಲ್ಲೆಗೆ ಏನು ಲಾಭವಿದೆ ಎಂದು ನೋಡಲು ನಾನು ಕಾಯುತ್ತಿದ್ದೇನೆ. ಲಾಕ್‌ಡೌನ್ ಸಡಿಲವಾಗದಿದ್ದರೆ ಮುಂದಿನ ದಿನಗಳಲ್ಲಿ ಜನರ ಬದುಕು ಅಸ್ತವ್ಯಸ್ತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಗಳ ಬಗ್ಗೆ ಅಭಿಯಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು. ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೈತ್ರಾ ಕೊಠಾಕರ್, ಬಸವರಾಜ ದೊಡ್ಮನಿ, ಎಲ್.ಟಿ. ಪಾಟೀಲ್ ಹಾಗೂ ಇತರರು ಇದ್ದರು.