Advertisement

ದಿನಗೂಲಿ ನೌಕರರಲ್ಲಿಯೇ ಆತ್ಮಹತ್ಯೆ ಹೆಚ್ಚು

10:18 AM Jan 10, 2020 | Team Udayavani |

ನವದೆಹಲಿ: ದೇಶದಲ್ಲಿ ದಿನಗೂಲಿ ನೌಕರರು, ಸಾಧಾರಣ ಶಿಕ್ಷಣ ಪಡೆದವರು, 1 ಲಕ್ಷ ರೂ.ಗಳೊಳಗೆ ವಾರ್ಷಿಕ ಆದಾಯ ಇರುವವರಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಿದೆ. ಹೀಗಾಗಿ, ಆತ್ಮಹತ್ಯೆಗೂ ಬಡತನಕ್ಕೂ ನೇರ ಸಂಬಂಧ ಇದೆ ಎಂಬ ಅಂಶ ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (ಎನ್‌ಸಿಆರ್‌ಬಿ)ದ 2018ನೇ ಸಾಲಿನ “ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆ’ ಎಂಬ ಶಿರೋನಾಮೆಯ ವರದಿಯಲ್ಲಿ ಉಲ್ಲೇಖಗೊಂಡಿದೆ.

Advertisement

ಮತ್ತೂಂದು ಗಮನಾರ್ಹ ಅಂಶವೆಂದರೆ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ನಡೆಯುತ್ತಿದ್ದ ಕ್ಷೇತ್ರವೆಂದರೆ ಕೃಷಿ. ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ ಸತತ ಮೂರನೇ ವರ್ಷ ಈ ಕ್ಷೇತ್ರದಿಂದ ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಕಡಿಮೆ.

ಬಡತನಕ್ಕೆ ನಂಟು:
2018ನೇ ಸಾಲಿನಲ್ಲಿ 1,34,516 ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಪೈಕಿ ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು ಹೆಚ್ಚು. ಇದೇ ವ್ಯಾಪ್ತಿಯಲ್ಲಿ ಶಿಕ್ಷಣ ಪಡೆದವರ ಅಂಶದ ಲೆಕ್ಕಾಚಾರ ತೆಗೆದುಕೊಂಡರೆ, ಸಾಧಾರಣ ಶಿಕ್ಷಣ ಪಡೆದವರು ಮತ್ತು ದಿನಗೂಲಿ ನೌಕರರು ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯಲ್ಲಿ ಹೆಚ್ಚಿದ್ದಾರೆ ಎನ್ನುತ್ತಿದೆ ವರದಿ.

ಇದೇ ವೇಳೆ, 2018ರಲ್ಲಿ ದೇಶಾದ್ಯಂತ ಪ್ರತಿದಿನ ಸರಾಸರಿ 80 ಕೊಲೆಗಳು, 289 ಅಪಹರಣಗಳು ಮತ್ತು 91 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕಕ್ಕೆ 2ನೇ ಸ್ಥಾನ
ಇನ್ನು 2018ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10,349 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,763 ಮಂದಿ ಬೆಳೆಗಾರರು ಮತ್ತು 4,586 ಮಂದಿ ಕೃಷಿ ಕಾರ್ಮಿಕರು. ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಅಂದರೆ ಈ ರಾಜ್ಯಗಳಲ್ಲಿ ಕ್ರಮವಾಗಿ 3,594 ಮತ್ತು 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ, ಒಡಿಶಾಗಳಲ್ಲಿ ರೈತರು ಆತ್ಮಹತ್ಯೆಯನ್ನೇ ಮಾಡಿಕೊಂಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next