Advertisement

“ಮದ್ದಳೆ ಮಾಂತ್ರಿಕ’ನ 100ನೇ ಜನ್ಮದಿನ

10:58 AM Dec 16, 2018 | Harsha Rao |

ಉಡುಪಿ: “ಮದ್ದಳೆ ಮಾಂತ್ರಿಕ’ ಹಿರಿಯಡಕ ಗೋಪಾಲರಾಯರು ಶನಿವಾರ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮದ್ದಳೆಯಲ್ಲಿ ವಿಶೇಷ ಸಾಧನೆ ಮಾಡಿದ ಅವರು ಯಕ್ಷಗಾನದ ವಿವಿಧ ಆಯಾಮಗಳನ್ನು ತಿಳಿದವರಾಗಿ “ಸವ್ಯಸಾಚಿ’ ಪರಂಪರೆಗೆ ಸೇರಿದವರು.

Advertisement

ಹಿರಿಯಡಕ ಶೇಷಗಿರಿ ರಾವ್‌ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರರಾಗಿ 1919ರ ಡಿ.15ರಂದು ಜನಿಸಿದ ಗೋಪಾಲ ರಾಯರಿಗೆ ಒಂದರ್ಥದಲ್ಲಿ ತಂದೆಯೇ ಗುರು. ಅವರು ಆಯುರ್ವೇದ ವೈದ್ಯರಾಗಿ, ಯಕ್ಷಗಾನದ ಸವ್ಯಸಾಚಿಯಾಗಿದ್ದವರು. ಉಡುಪಿ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿದ್ದ ಅನಂತೇಶ್ವರ ಕಿ.ಪ್ರಾ. ಶಾಲೆಯಲ್ಲಿ ಐದನೆ ತರಗತಿ ವರೆಗೆ ಓದಿದ ಗೋಪಾಲ ರಾಯರು ಮತ್ತೆ ಹಿರಿಯಡಕಕ್ಕೆ ಹೋಗಿ ಓದನ್ನು ಬಹುಕಾಲ ಮುಂದುವರಿಸಲಿಲ್ಲ. 

ಹಿರಿಯಡಕದ ಪಟ್ಟಣಶೆಟ್ಟಿ ನಾಗಪ್ಪ ಕಾಮತ್‌ರಲ್ಲಿ ಹೆಜ್ಜೆಗಾರಿಕೆ ಕಲಿತರು. ತಂದೆಯವರ ಇಚ್ಛೆಗೆ ವಿರುದ್ಧವಾಗಿ ಯಕ್ಷಗಾನವನ್ನು “ಕದ್ದು’ ಕಲಿತರು. ಹಾಸ್ಯಗಾರರೂ ಮದ್ದಳೆಗಾರರೂ ಆಗಿದ್ದ ಪೆರ್ಡೂರು ವೆಂಕಟ ರಾವ್‌ ಅವರಲ್ಲಿ ಮದ್ದಳೆ ಕಲಿತು ಹಿರಿಯಡಕ ಮೇಳದಲ್ಲಿ ಸ್ವಲ್ಪ ಕಾಲ ಸಣ್ಣ ಪುಟ್ಟ ವೇಷಗಳನ್ನು ಮಾಡಿದರು. ಹೆಸರಾಂತ ಭಾಗವತರಾಗಿದ್ದ ನಾರಾಯಣಪ್ಪ ಉಪ್ಪೂರರ ತಂದೆ ಶ್ರೀನಿವಾಸ ಉಪ್ಪೂರರ ಭಾಗವತಿಕೆ ಜತೆ ಪಳಗಿದರು. ಶಿವರಾಮಯ್ಯರ ಜತೆ ಒತ್ತು ಮದ್ದಳೆಗಾರರಾದರು. 

ರಾಯರು ಮಂದಾರ್ತಿ ಮೇಳದಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದು, ಯಕ್ಷಗಾನದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದಾಗ ತಮ್ಮ  58ನೇ ವಯಸ್ಸಿನಲ್ಲಿ ಮೇಳ ಬಿಟ್ಟರು.

ಮದ್ದಳೆ ಪರಿವರ್ತನೆ
ಜೋಡಾಟ ಅಬ್ಬರದಿಂದ ನಡೆಯುತ್ತಿದ್ದ ಕಾಲದಲ್ಲಿ ಸ್ಪರ್ಧೆಗಾಗಿ ಗೋಪಾಲ ರಾಯರು 30 ಇಂಚಿನ ಅಗಲದ ಮದ್ದಳೆ ಬದಲು ಮೊಣಕೈ ಉದ್ದದ ಮದ್ದಳೆಯನ್ನು ಜಾರಿಗೆ ತಂದರು. ಈಗಲೂ ಮಧ್ಯರಾತ್ರಿಯ ವರೆಗೆ ದೊಡ್ಡ ಮದ್ದಳೆ (ಇಳಿ ಧ್ವನಿ), ಅನಂತರ ಸಣ್ಣ ಮದ್ದಳೆಯನ್ನು (ಏರುಧ್ವನಿ) ನುಡಿಸುವುದು ಚಾಲ್ತಿಯಲ್ಲಿದೆ.

Advertisement

ನಾಟಿ ವೈದ್ಯರೂ ಹೌದು
ತಂದೆಯಿಂದ ವೈದ್ಯಕೀಯ ಜ್ಞಾನ ಕಲಿತಿದ್ದ ಗೋಪಾಲ ರಾಯರು ಉತ್ತಮ ವೈದ್ಯರೂ ಆಗಿದ್ದರು. ಪಾರ್ಶ್ವವಾಯು, ಅಪಸ್ಮಾರಕ್ಕೆ ಅವರ ಔಷಧ ರಾಮಬಾಣವಾಗಿತ್ತು. ಅನಂತರ ಸರಕಾರದ ಲೈಸನ್ಸ್‌, ಲೆಕ್ಕಪತ್ರ ಶೋಧನೆ ಇತ್ಯಾದಿ ಕಿರಿಕಿರಿಯಿಂದ ವೈದ್ಯ ವೃತ್ತಿಗೆ ವಿದಾಯ ಹೇಳಿದರು.

ಕುಗ್ಗದ ಉತ್ಸಾಹ
1969-70ರ ವೇಳೆ ಡಾ| ಶಿವರಾಮ ಕಾರಂತರ ಒಡನಾಟ ಗೋಪಾಲ ರಾಯರಿಗೆ ಆಯಿತು. ಅದೇ ವೇಳೆ ಅಮೆರಿಕದಿಂದ ಬಂದ ಮಾರ್ತಾ ಆ್ಯಸ್ಟರ್ನ್ ಮತ್ತು ಕಾರಂತರ ಜತೆ ಗೋಪಾಲ ರಾಯರು ಸಂಘಟಕರಾಗಿ, ಕಲಾವಿದರಾಗಿ ಸೇವೆ ಸಲ್ಲಿಸಿದರು. ಕಾರಂತರು ರಂಗ ಅಭಿನಯಕ್ಕೆ ಒತ್ತು ಕೊಟ್ಟ “ಕಿನ್ನರ ನೃತ್ಯ’, “ಮೂಕನೃತ್ಯ’ ತಂಡದಲ್ಲಿಯೂ ಗೋಪಾಲ ರಾವ್‌ ತೊಡಗಿಸಿಕೊಂಡರು. ಅಂಬಲಪಾಡಿ ಮೊದಲಾದೆಡೆ ಮದ್ದಳೆ ಸೇರಿದಂತೆ ವಿವಿಧ ಯಕ್ಷ ಪ್ರಕಾರಗಳ ತರಗತಿ ನಡೆಸಿದರು. 1971ರಲ್ಲಿ ಉಡುಪಿ ಎಂಜಿಎಂ ಯಕ್ಷಗಾನ ತರಬೇತಿ ಕೇಂದ್ರ ಆರಂಭವಾದಾಗ ಸೇರಿದ ಮೂವರು ಗುರುಗಳಲ್ಲಿ ಗೋಪಾಲ ರಾಯರೂ ಒಬ್ಬರು. ಇನ್ನಿಬ್ಬರು ನೀಲಾವರ ರಾಮಕೃಷ್ಣಯ್ಯ ಮತ್ತು ಮಟಪಾಡಿ ವೀರಭದ್ರ ನಾಯಕ್‌. ಅನೇಕ ತಾಳಮದ್ದಳೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಗೋಪಾಲರಾಯರು ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾದವರು. ಇತ್ತೀಚೆಗೆ ಸಚಿವೆ ಡಾ| ಜಯಮಾಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದಾಗಲೂ ಗೋಪಾಲರಾಯರು ನುಡಿಸಿದ ಮದ್ದಳೆ ಧ್ವನಿ, ಕಲಾವಿದೆಯೂ ಆದ ಸಚಿವರನ್ನೇ ನಿಬ್ಬೆರಗಾಗಿಸಿತ್ತು.

ಸಾಂಪ್ರದಾಯಿಕ  ಯಕ್ಷಗಾನದ ಸವ್ಯಸಾಚಿ
ಹಿಂದೆಲ್ಲ ಕಲಾವಿದರು ಎಂಬ ಗೌರವ ಸಿಗಬೇಕಾದರೆ ಆಲ್‌ರೌಂಡರ್‌ ಆಗಿರಬೇಕಿತ್ತು. ಗೋಪಾಲರಾಯರು ಅಂತಹ ಸವ್ಯಸಾಚಿ. ಅವರು ಯಕ್ಷಗಾನ ವೇಷ ಹಾಕಿದ್ದನ್ನು ನೋಡಿದ್ದೇನೆ. ಮಾರ್ತಾ ಆ್ಯಸ್ಟರ್ನ್ ಅವರಿಗಾಗಿ ಈಶ್ವರನ ಪಾತ್ರವನ್ನು ಅದ್ಭುತವಾಗಿ ಮಾಡಿದ್ದರು. ಕಾರಂತರು ಯಕ್ಷಗಾನದಲ್ಲಿ ಮಾಡಿದ ಪರಿವರ್ತನೆಗಳನ್ನು ಮನಸಾರೆ ಒಪ್ಪಿಕೊಳ್ಳದಿದ್ದರೂ ಕಾರಂತರಿಗಾಗಿ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ಮಾರ್ತಾ ಆ್ಯಸ್ಟರ್ನ್ ಮಾತ್ರ ದೀವಟಿಗೆ, ಶ್ರುತಿಗೆ ಪುಂಗಿ ಇತ್ಯಾದಿ ಸಂಪ್ರದಾಯಬದ್ಧ ಕಲೆಯನ್ನೇ ಒಪ್ಪಿಕೊಂಡದ್ದರಿಂದ ಗೋಪಾಲರಾಯರಿಗೆ ಅದು ಹಿಡಿಸಿತ್ತು.     
– ಡಾ| ರಾಘವ ನಂಬಿಯಾರ್‌, “ಮದ್ದಳೆಯ ಮಾಯಾಲೋಕ’ ಗ್ರಂಥಕರ್ತರು.

Advertisement

Udayavani is now on Telegram. Click here to join our channel and stay updated with the latest news.

Next