ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ ಹಾಕಬೇಕೆಂಬ ನಿರ್ಧಾರದ ಬೆನ್ನಲ್ಲೇ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದ ಕೊಬ್ಬರಿ ಹೋರಿಯೊಂದು (ನಂ.144) 10.01 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ತಾಲೂಕಿನ ಖುರ್ದಕೋಡಿಹಳ್ಳಿ ಗ್ರಾಮದ ರೇವಣಸಿದ್ದಪ್ಪ ಮಾತನವರ ಎಂಬ ರೈತನಿಗೆ ಸೇರಿದ ಈ ಹೋರಿಯನ್ನು ತಮಿಳುನಾಡಿನ ವೆಲ್ಲಂಪಾಡಿಯ ರೈತ ಸೆಲ್ವಂ 10.01 ಲಕ್ಷ ರೂ. ಕೊಟ್ಟು ಪಡೆದಿದ್ದಾನೆ.
ದಾಖಲೆ ಮೊತ್ತ: ಸಾಮಾನ್ಯವಾಗಿ ಉತ್ತಮ ತಳಿ ಹೋರಿಗಳನ್ನು ಬಹಳವೆಂದರೆ 1ಲಕ್ಷ ರೂ.ಗಳವರೆಗೆ ಮಾರಾಟವಾಗಿದ್ದನ್ನು ಕಂಡಿದ್ದೇವೆ. ಆದರೆ, ಒಂದೇ ಹೋರಿಗೆ ಇಷ್ಟು ಮೊತ್ತ ನೀಡಿ ಖರೀದಿಸಿರುವುದು ದಾಖಲೆಯೇ ಸರಿ.
ಏನಿದರ ವಿಶೇಷ?: ಅಮರಾವತಿ ತಳಿ ಹೋರಿಯಾಗಿದ್ದು, ವೇಗವಾಗಿ ಓಡುತ್ತದೆ. ಹೋರಿಯನ್ನು ಕೊಬ್ಬರಿ ಸ್ಪರ್ಧೆಗಳಲ್ಲಿ ಹಿಡಿಯುವುದು ಒತ್ತಟ್ಟಿ ಗಿರಲಿ ಮುಟ್ಟುವುದು ಸಹ ಕಷ್ಟ. ಹೀಗಾಗಿ ಇದಕ್ಕೆ ಅಷ್ಟೊಂದು ಬೆಲೆ. ಇದು 8 ರಿಂದ 9 ಸೆಕೆಂಡ್ ಗಳಲ್ಲಿ ಕನಿಷ್ಟ 250 ಮೀಟರ್ ದೂರ ಕ್ರಮಿಸುತ್ತದೆ ಎನ್ನುತ್ತಾರೆ ರೈತ ಗಿರೀಶ್ ಕೊಪ್ಪದ.
ಜಲ್ಲಿಕಟ್ಟು ಮಾದರಿಯ ಸೆಕೆಂಡ್ಸ್ ಹಬ್ಬ: ರೈತ ಸೆಲ್ವಂ ಜಲ್ಲಿಕಟ್ಟು ಮಾದರಿಯ ಸೆಕೆಂಡ್ಸ್ ಹಬ್ಬದ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದನ್ನು ಪಡೆದಿದ್ದಾಗಿ ತಿಳಿದು ಬಂದಿದೆ. ಆಂಧ್ರದ ಪಲಮನ್ವೇರಿಯಿಂದ ತಂದದ್ದು: ಹೋರಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಆಂಧ್ರದ ಪಲಮನ್ವೇರಿಯಿಂದ 1 ಲಕ್ಷ ರೂ. ಕೊಟ್ಟು ಖರೀದಿಸಿದ್ದೆ. ರೈತ ಸೆಲ್ವಂ ಕಳೆದ ವರ್ಷವೇ 13 ಲಕ್ಷ ರೂ.ಗೆ ಕೇಳಿದ್ದ ಆದರೆ, ನಾನು ಕೊಟ್ಟಿರಲಿಲ್ಲ. ಅದರ ಮೇಲೆ ನನಗೆ ಅಷ್ಟೊಂದು ಪ್ರೀತಿಯಿತ್ತು.
ರೇವಣಸಿದ್ದಪ್ಪ ಮಾತನವರ,
ಹೋರಿ ಮಾರಿದ ರೈತ
ನನ್ನ ಪುಣ್ಯ
ನನಗೆ ಹಣ ಮುಖ್ಯವಲ್ಲ, ಕೃಷಿಯಿಂದ ಸಾಕಷ್ಟು ಗಳಿಸಿದ್ದೇನೆ. ಅದಕ್ಕಾಗಿಯೇ ವ್ಯಯಿಸುತ್ತೇನೆ. ಸೆಕೆಂಡ್ಸ್ ಹಬ್ಬದಲ್ಲಿ ಬಹುಮಾನ ಪಡೆಯುವ ವಿಶ್ವಾಸದಿಂದ ಹುಡುಕಾಡಿಕೊಂಡು ಬಂದು ಈ ಹೋರಿ ಪಡೆದಿದ್ದೇನೆ. ಇದು ಸಿಕ್ಕಿದ್ದೇ ನನ್ನ ಪುಣ್ಯ.
ಸೆಲ್ವಂ, ವೆಲ್ಲಂಪಾಡಿ ರೈತ