Advertisement

Women; 5 ವರ್ಷದಲ್ಲಿ 10,000 ಮಹಿಳಾ ದೌರ್ಜನ್ಯ ಕೇಸ್‌!

12:29 AM Aug 19, 2024 | Team Udayavani |

ಬೆಂಗಳೂರು: ಮಹಿಳೆಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಕಾನೂನು, ಯೋಜನೆಗಳು ಜಾರಿಯಲ್ಲಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ರಾಜ್ಯ ಮಹಿಳಾ ಆಯೋಗಕ್ಕೆ ಬರುತ್ತಿರುವ ರಾಶಿಗಟ್ಟಲೆ ದೂರುಗಳೇ ಇದಕ್ಕೆ ಸಾಕ್ಷಿ.

Advertisement

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಕೆಲಸ ಮಾಡುವ ಸ್ಥಳಗಳಲ್ಲಿ ಕಿರುಕುಳ, ಲೈಂಗಿಕ ದೌರ್ಜನ್ಯ, ಪೊಲೀಸ್‌ ದೌರ್ಜನ್ಯ, ಆಸ್ತಿ ವಿವಾದ ಹೀಗೆ ನಾನಾ ರೀತಿಯಲ್ಲಿ ಕಳೆದ 2020-21ರಿಂದ 24ರ ಜುಲೈ ತಿಂಗಳವರೆಗೆ (5 ವರ್ಷಗಳಲ್ಲಿ) ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ದೂರುಗಳು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿವೆ. ಈ ಪೈಕಿ ರಕ್ಷಣೆ ಕೋರಿ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಅಗ್ರಸ್ಥಾನದಲ್ಲಿವೆ.

ಮನೆಯ ಸುತ್ತಮುತ್ತಲಿನ ನೆರೆಯವರಿಂದ, ರಸ್ತೆಗಳಲ್ಲಿ ಚುಡಾಯಿಸುವುದು, ಆಸ್ತಿ ವಿಷಯಗಳಿಗೆ ಸಂಬಂಧಪಟ್ಟಂತೆ ಬೆದರಿಕೆ ಹೀಗೆ ನಾನಾ ವಿಷಯಗಳಿಗೆ ಸಂಬಂಧಪಟ್ಟಂತೆ ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ಬಂದ ದೂರುಗಳೇ ಹೆಚ್ಚು. ಕಳೆದ 2020-21ರಿಂದ 24ರ ಜುಲೈ ತಿಂಗಳವರೆಗೆ ರಕ್ಷಣೆಗೆ ಸಂಬಂಧಿಸಿ ಒಟ್ಟು 2,895 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ 324 (ಜುಲೈವರೆಗೆ) ದೂರುಗಳು ಬಂದಿದ್ದು, ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸಲಾಗಿದೆ.

ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಕರಣ
ವಿದ್ಯಾವಂತರು ಹಾಗೂ ಉದ್ಯೋಗಸ್ಥರೇ ಹೆಚ್ಚಿರುವ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಜಾರಿಗೊಳಿಸಿರುವ ಸೇಫ್‌ ಸಿಟಿ’ ಯೋಜನೆ ಇದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಕಳೆದ 2021-22ನೇ ಸಾಲಿನಿಂದ 2024-25ನೇ ಸಾಲಿನ ಏಪ್ರಿಲ್‌ವರೆಗೆ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿ 2,861 ಪ್ರಕರಣಗಳು ಆಯೋಗದಲ್ಲಿ ದಾಖಲಾಗಿವೆ. ಈ ಪೈಕಿ, ರಕ್ಷಣೆ ಕೋರಿ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ತಲಾ 802 ದೂರುಗಳು, ವರದಕ್ಷಿಣೆ ಕಿರುಕುಳ 191, ಪ್ರೀತಿಯ ಹೆಸರಿನಲ್ಲಿ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದು ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ 55 ದೂರುಗಳಿವೆ. ಇದರಲ್ಲಿ ಶೇ.50ರಷ್ಟು ವಿದ್ಯಾವಂತರೇ ಆಗಿದ್ದಾರೆ. 24 ಲೈಂಗಿಕ ಕಿರುಕುಳ, 10 ಅತ್ಯಾಚಾರ ಪ್ರಕರಣಗಳು ಹಾಗೂ ಅತ್ಯಾಚಾರದಿಂದ ಸಾವಿಗೀಡಾದ ಒಂದು ಪ್ರಕರಣ ದಾಖಲಾಗಿವೆ.

ಗಂಡು ಮಗುವಿಗಾಗಿ ಅತ್ತೆ-ಮಾವನ ಕಾಟ!
ಪತಿ-ಪತ್ನಿಯರ ನಡುವಿನ ಜಗಳ, ದುಶ್ಚಟಗಳ ಅಮಲಿನಲ್ಲಿ ನಿತ್ಯ ಹೆಂಡತಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುವುದು, ಹೆಣ್ಣು ಮಗು ಇದ್ದರೂ, ಗಂಡು ಮಗು ಬೇಕೆ ಬೇಕೆ ಎಂದು ಅತ್ತೆ-ಮಾವನ ಕಾಟ ಹೀಗೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಲ್ಲಿ (ಜುಲೈವರೆಗೆ) ಒಟ್ಟು 2137 ಪ್ರಕರನಗಳು ದಾಖಲಾಗಿವೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸ್ವೀಕರಿಸಿದ 153 ದೂರುಗಳಲ್ಲಿ 46 ಪ್ರಕರಣಗಳಿಗೆ ಪರಿಹಾರ ನೀಡಲಾಗಿದ್ದು ಉಳಿದ 107 ಪ್ರಕರಣಗಳು ಇನ್ನೂ ಚಾಲ್ತಿಯಲ್ಲಿವೆ ಎಂದು ರಾಜ್ಯ ಮಹಿಳಾ ಆಯೋಗದ ಮೂಲಗಳು ತಿಳಿಸುತ್ತವೆ.

Advertisement

ರಾಜ್ಯ ಮಹಿಳಾ ಆಯೋಗಕ್ಕೆ ಬರುವ ಎಲ್ಲ ಪ್ರಕರಣಗಳನ್ನು ಪರಿಶೀಲಿಸುತ್ತೇವೆ. ಕೌಟುಂಬಿಕ ದೌರ್ಜನ್ಯ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಅಗತ್ಯ ಇರುವವರಿಗೆ ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಇನ್ನೂ ಕೆಲವು ಪ್ರಕರಣಗಳನ್ನು ಪೊಲೀಸ್‌ ಇಲಾಖೆಗೆ ಒಪ್ಪಿಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ.
– ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಮಹಿಳಾ ದೌರ್ಜನ್ಯ ಪ್ರಕರಣಗಳು
ವರ್ಷ ಪ್ರಕರಣಗಳ ಸಂಖ್ಯೆ
2020-21 2456
2021-22 2200
2022-23 2358
2023-24 2179
2024-25 (ಜುಲೈ ವರೆಗೆ) 960
ಒಟ್ಟು 10,153

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next