ರಾಮದುರ್ಗ: ನಿರೀಕ್ಷೆಯಂತೆ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದು, ಅಲ್ಪಮಳೆಯಲ್ಲಿ ಬೆಳೆಯುವ ಸಿರಿಧಾನ್ಯಗಳ ಬೆಳೆಗೆ ರಾಜ್ಯ ಸರಕಾರ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಕೃಷಿ ಸಚಿವ ಶಿವಶಂಕರರಡ್ಡಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 50 ಮಳೆಕೊರತೆ ಇದ್ದು, ಕೆಲವೆಡೆ ಮಳೆಯಾದರೆ ಮತ್ತೆ ಕೆಲವಡೆ ಮಳೆಯಾಗಿಲ್ಲ. ಜಿಲ್ಲೆಯಾದ್ಯಂತ ಶೇ.12 ಭೂ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆ ನೇತೃತ್ವದಲ್ಲಿ ರೈತರಿಗೆ ಸಾಕಾಗುವಷ್ಟು ಬೀಜ, ಗೊಬ್ಬರ ಸಂಗ್ರಹಿಸಲಾಗಿದ್ದು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2.61 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇದ್ದು, 1.38 ಮೆಟ್ರಿಕ್ ಟನ್ ಪೂರೈಕೆ ಇದೆ. ಬೀಜಗೊಬ್ಬರಗಳ ಕೊರತೆಯಾಗಂತೆ ಸರಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದರು.
ನೈಸರ್ಗಿಕ, ಶೂನ್ಯ ಬಂಡವಾಳ ಕೃಷಿಗೆ ಪ್ರೋತ್ಸಾಹಿಸಲು ಸರಕಾರ ಬದ್ಧವಾಗಿದೆ. ಕೃಷಿ ಹೊಂಡ, ಸೂಕ್ಷ್ಮ ನೀರಾವರಿ ಸೇರಿದಂತೆ ವಿವಿಧ ಕೃಷಿ ಪ್ರೋತ್ಸಾಹಿ ಯೋಜನೆಗೆ ಸರಕಾರ ಅನುದಾನ ಮೀಸಲಿಟ್ಟಿದ್ದು, ರೈತರು ಸದುಪಯೋಗ ಪಡೆಯಬೇಕೆಂದರು.
ವಿಮಾ ಪಾಲಸಿ ಮೊತ್ತ ಪಾವತಿಗೆ ಸೂಚನೆ: 2016-17ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಇನ್ನು ಹಲವು ರೈತರಿಗೆ ರೂ. 5 ಕೋಟಿ ವಿಮಾ ಪಾಲಿಸಿ ಮೊತ್ತ ಪಾವತಿಯಾಗುವುದು ಬಾಕಿ ಇದ್ದು, ಶ್ರೀರಾಮ ಇನ್ಸುರೆನ್ಸ್ ಕಂಪನಿಗೆ ಶೀಘ್ರ ಪಾವತಿ ಮಾಡುವಂತೆ ಸರಕಾರ ಸೂಚಿಸಿದೆ ಎಂದರು.
ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಸಿ: ಕೇಂದ್ರ ಸರಕಾರದ ಪ್ರಧಾನಮಂತ್ರಿ ಕೃಷಿ ಸನ್ಮಾನ ನಿಧಿ ಯೋಜನೆಯಡಿಯಲ್ಲಿ ಪ್ರತಿ ರೈತರಿಗೆ ಮೂರು ಕಂತುಗಳಲ್ಲಿ ರೂ. 6,000 ಒದಗಿಸುವ ವ್ಯವಸ್ಥೆ ಚುನಾವಣೆ ಪ್ರಯುಕ್ತ ನನೆಗುದಿಗೆ ಬಿದ್ದಿತ್ತು. ಈಗ ತ್ವರಿತಗತಿಯಲ್ಲಿ ದಾಖಲಾತಿಗಳನ್ನು ಸಂಗ್ರಹಿಸಿ ಯೋಜನೆ ಅನುಷ್ಠಾನಕ್ಕೆ ಸರಕಾರ ತುರ್ತು ಕ್ರಮ ತೆಗೆದುಕೊಂಡಿದೆ. 80 ಸಾವಿರ ರೈತರು ಯೋಜನೆಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ. 40 ಸಾವಿರ ರೈತರು ಯೋಜನೆ ಲಾಭ ಪಡೆಯಲು ಅರ್ಹತೆ ಹೊಂದಿದ್ದಾರೆ. ಶೀಘ್ರ ರೈತರು ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಬೇಕು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳು ಬಾಡಿಗೆ ದೊರೆಯಲು ವ್ಯವಸ್ಥೆ ಕಲ್ಪಿಸಲಾಗಿದ್ದು, 73 ಸಾವಿರ ರೈತರು ಅದರ ಸದುಪಯೋಗ ಪಡೆದಿದ್ದಾರೆ ಎಂದರು.
ಬಿಜೆಪಿ ಯುವ ಮುಖಂಡ ಮಲ್ಲಣ್ಣ ಯಾದವಾಡ, ಕೃಷಿಕ ಸಮಾಜ ಅಧ್ಯಕ್ಷ ವೈ.ಎಚ್. ಪಾಟೀಲ, ಜಿಪಂ ಸದಸ್ಯ ಕೃಷ್ಣಾ ಲಮಾಣಿ, ನ್ಯಾಯವಾದಿ ಆರ್.ಎಚ್. ತೋಳಗಟ್ಟಿ ಸೇರಿದಂತೆ ಇತರರಿದ್ದರು.