ರಾಯಚೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಲು ತೆಲಂಗಾಣ ಮಾದರಿಯಲ್ಲಿ ಎಕರೆಗೆ ಹತ್ತು ಸಾವಿರ ರೂ.ನಂತೆ ಹತ್ತು ಎಕರೆವರೆಗೆ ನೀಡುವ ಯೋಜನೆ ಜಾರಿ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಮಾತನಾಡಿದ ಅವರು, ಕೃಷಿಗೆ 24 ಗಂಟೆ ಉಚಿತ ವಿದ್ಯುತ್ ನೀಡಲಾಗುವುದು. ಈ ಭಾಗ ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಕಲ್ಯಾಣವಾಗಿಲ್ಲ. ಹತ್ತಿ, ತೊಗರಿ ಬೆಲೆ ಕುಸಿದಿದೆ. ಸರ್ಕಾರ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ವಾಗ್ಧಾಳಿ ನಡೆಸಿದರು.ಹತ್ತಿ ಬಿತ್ತನೆ ಬೀಜ ಕಳಪೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ಇಳುವರಿ ಕೂಡ ಕಡಿಮೆ ಆಗಿದೆ. ಬೆಲೆ ಕೂಡ ಸರಿಯಾಗಿ ಸಿಗುತ್ತಿಲ್ಲ. ನನ್ನ ಸರ್ಕಾರ ಬಂದರೆ ಗುಣಮಟ್ಟದ ಹತ್ತಿ ಬಿತ್ತನೆ ಬೀಜ ವಿತರಣೆ ಸೇರಿದಂತೆ ಕ್ವಿಂಟಲ್ ಹತ್ತಿಗೆ 11,000 ರೂ. ಬೆಲೆ ನಿಗದಿ
ಮಾಡುವುದಾಗಿ ತಿಳಿಸಿದರು.
ರಾಯಚೂರು ಜಿಲ್ಲೆಯ ಅಪೌಷ್ಟಿಕತೆ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಎಷ್ಟೊ ಜನ ಅನಾರೋಗ್ಯದಿಂದ ನನ್ನ ಬಳಿ ಸಹಾಯ ಕೇಳಿ ಬರುತ್ತಾರೆ. ಆದರೆ, ಅಧಿಕಾರ ಇಲ್ಲ
ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ನಮಗೆ ಸಂಪೂರ್ಣ ಬಹುಮತದ ಸರ್ಕಾರ ನೀಡಿದರೆ, ಗ್ರಾಮಕ್ಕೊಂದು ಸುಸಜ್ಜಿತ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತರಿಗೆ ಬೆಲೆ ಕುಸಿತವಾದಾಗ ಬೆಳೆ ರಕ್ಷಿಸಲು ಕೋಲ್ಡ್ ಸ್ಟೋರೇಜ್, ಗೋದಾಮುಗಳ ನಿರ್ಮಾಣ ಮಾಡಲಾಗುವುದು. ಯುವಕರಿಗೆ ಮಹಿಳೆಯರಿಗೆ ತರಬೇತಿ ನೀಡಿ ಮಾಸಿಕ 15 ಸಾವಿರ ವರಮಾನ ಬರುವಂತೆ ಮಾಡಲಾಗುವುದು. ವಸತಿ ಇಲ್ಲದವರಿಗೆ ಸೂರೊದಗಿಸುವ ಮಹತ್ವದ ಯೋಜನೆ ಜಾರಿ ಮಾಡಲಾಗುವುದು. ಜನ ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಸಂಕಲ್ಪ ಮಾಡಿದ್ದೇವೆ.65 ವರ್ಷದ ವೃದ್ಧರಿಗೆ ಐದು ಸಾವಿರ ಹಾಗೂ ಚಿಕ್ಕ ವಯಸ್ಸಿನ ಮಹಿಳೆಯರಿಗೆ ಎರಡೂವರೆ ಸಾವಿರ ರೂ. ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
Related Articles
ನಮಗೆ ಐದು ವರ್ಷ ಅವಕಾಶ ಕೊಡಿ. ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೌಲಭ್ಯ, ಉಚಿತ ಮನೆ, ಉಚಿತ ವಿದ್ಯುತ್ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಿ ತೋರಿಸುತ್ತೇವೆ. ನಾನು ಮಾತು ತಪ್ಪುವುದಿಲ್ಲ. ಒಂದು ವೇಳೆ ಮಾತು ತಪ್ಪಿದರೆ ಇನ್ನೆಂದೂ ನಾನು ಮತ ಕೇಳಲು ನಿಮ್ಮ ಬಳಿ ಬರುವುದಿಲ್ಲ. ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುವೆ ಇದೇ ನನ್ನ ವಚನ ಎಂದರು.
ಅದಕ್ಕೂ ಮುನ್ನ ಗಬ್ಬೂರು ಗ್ರಾಮದಲ್ಲಿ ಅವರಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ಅವರು, ಗಬ್ಬೂರು ಕೇಂದ್ರವನ್ನು ತಾಲೂಕು ಮಾಡುವುದಾಗಿ ಭರವಸೆ ನೀಡಿದರು. ಮಸರಕಲ್ ಗ್ರಾಮದಿಂದ ಶುರುವಾದ ಯಾತ್ರೆ ಸುಂಕರೇಶ್ವರಹಾಳ, ಗಬ್ಬೂರು, ಕಲಮಲ, ಕುರ್ಡಿ, ಅರೋಲಿ ಮಾರ್ಗವಾಗಿ ಸಾಗಿತು. ಶಕ್ತಿನಗರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರೋಲಿ ಗ್ರಾಮದಲ್ಲೆ ಸಂಜೆಯಾಗಿತ್ತು. ಸಂಜೆ ಅರೋಲಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನ ಪಡೆದರು. ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅನೇಕರು ಪಾಲೊಂಡಿದ್ದರು.