ಜೀವನದಲ್ಲಿ ಅದೆಷ್ಟೋ ಕನಸು ಕಂಡಿರುತ್ತೇವೆ. ಆ ಕನಸನ್ನು ನನಸಾಗಿಸುವ ಕನಸೂ ಇರುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನೂ ಮಾಡುತ್ತೇವೆ. ಸತಾಯಿಸುವ ಸಮಯದೆದುರು ಬಗ್ಗದೆ ಕಾಯುತ್ತೇವೆ. ನೋವು- ಅವಮಾನಗಳನ್ನು ನಗುವಿನಿಂದಲೇ ಎದುರಿಸುತ್ತೇವೆ. ಎದುರಿಸುತ್ತಲೇ ಇರುತ್ತೇವೆ.
ನನಗೂ 10,000 ದ ಕನಸೊಂದಿದೆ. ಎಲ್ಲರಿಗೂ 10,000 ಎಂದು ಕೇಳಿದ ತತ್‌ಕ್ಷಣ ನೆನಪಾಗುವುದು ಹಣ. ಆದರೆ ನನಗೆ 10,000ದ ಕಲ್ಪನೆಯೇ ಬೇರೆ. ನನಗೆ ಈ ಸಂಖ್ಯೆಯನ್ನು ಕೇಳಿದ ತತ್‌ಕ್ಷಣ ನೆನಪಾಗೋದು ಒಬ್ಬ ವ್ಯಕ್ತಿಯ ಸುಂದರ ಜೀವನ. ಅಂದರೆ ಸುಂದರ ಜೀವನಕ್ಕೆ ಒಬ್ಬ ವ್ಯಕ್ತಿಗೆ ಇದು ಬೇಕೇಬೇಕು. 10,000 ವನ್ನು ಬಿಡಿಸಿ ಬರೆದಾಗ 1-ಆರೋಗ್ಯ, 0-ಕೆಲಸ, 0-ಹಣ, 0-ಕುಟುಂಬ, 0-ಕನಸು ಎಂದಿಟ್ಟುಕೊಳ್ಳಿ.
ಇದೆಲ್ಲವನ್ನು ಹೊಂದಿದರೆ ಮಾತ್ರ ಜೀವನ ಇಲ್ಲ ಅಂದ್ರೆ ಜೀವನಕ್ಕೆ ಅರ್ಥಾನೇ ಇಲ್ಲ. ಅದರಲ್ಲೂ ಮೊದಲನೇ ಅಂಕೆ 1 ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಬೆಲೆಯೂ ಇಲ್ಲ. ಅರ್ಥಾತ್ ಜೀವನದಲ್ಲಿ ನಾವೇನೇ ಕೆಲಸ ಮಾಡಬೇಕಾದರೂ, ಹಣ ಗಳಿಸಬೇಕೆಂದುಕೊಂಡರೂ, ಕುಟುಂಬ ಬೇಕೆಂದಿದ್ದರೂ, ಕನಸು ಕಂಡು ಅದನ್ನು ನನಸಾಗಿಸಬೇಕೆಂದಿದ್ದರೂ ಆರೋಗ್ಯ ಬೇಕೇಬೇಕು. ಆರೋಗ್ಯ ಇಲ್ಲದಿದ್ದರೆ ಏನನ್ನು ಮಾಡಲೂ ಸಾಧ್ಯವಿಲ್ಲ. ಇನ್ನೊಂದು ಅರ್ಥದಲ್ಲಿ ಆರೋಗ್ಯ ಇಲ್ಲದಿದ್ದರೆ ಏನಿದ್ದರೂ ಪ್ರಯೋಜನವಿಲ್ಲ.
ಒಬ್ಬ ವ್ಯಕ್ತಿ ಬಾಲ್ಯದಿಂದಲೇ ತಾನೊಂದು ಉತ್ತಮ ಕೆಲಸ ಪಡೆಯಬೇಕು, ಹಣ ಸಂಪಾದಿಸಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ರಾತ್ರಿ ನಿದ್ದೆಗೆಟ್ಟು, ಬಿಡುವಿಲ್ಲದೆ ಕೆಲಸ ಮಾಡಿರುತ್ತಾನೆ. ಅದರೆ ದುರಾದೃಷ್ಟವೋ ಎಂಬಂತೆ ಕೈಕೊಡುವ ಆರೋಗ್ಯ ಎಲ್ಲ ಪ್ರಯತ್ನವನ್ನೂ ಮಣ್ಣುಪಾಲು ಮಾಡಿಬಿಡುತ್ತದೆ.
ಆತ ಕಂಡ ಕನಸನ್ನು ನನಸು ಮಾಡಲಾಗದೇ, ಏನು ಮಾಡಬೇಕೆಂದು ತಿಳಿಯದೇ, ಯಾರ ಬಳಿಯೂ ಹೇಳಲಾಗದೇ ಕೊರಗುತ್ತಾನೆ. ಆದ್ದರಿಂದ ಜೀವನದಲ್ಲಿ ಏನು ಮಾಡಬೇಕಾದರೂ ಆರೋಗ್ಯ ಅತೀ ಮುಖ್ಯ. ನಾವು ಪ್ರತೀ ಕ್ಷಣ ದೇವರ ಬಳಿ ಒಳ್ಳೆಯ ಆರೋಗ್ಯಕ್ಕಾಗಿ ಬೇಡಿಕೊಳ್ಳೋಣ ಸೊನ್ನೆಗಳಿಗೆ ಅವುಗಳದ್ದೇ ಆದ ಬೆಲೆ, ಮಹತ್ವ ಬರುವಂತೆ ಮಾಡೋಣ.
ಕನಸು ಇಲ್ಲದೇ ಜೀವನ ಇಲ್ಲ.. ಕನಸು ನನಸಾಗಬೇಕಾದರೆ ಕೈಯ್ಯಲ್ಲಿ ಹಣ ಬೇಕು. ಹಣ ಬೇಕು ಎಂದರೆ ಅದಕ್ಕೆ ಕೆಲಸ ಬೇಕು. ಎಲ್ಲ ಕೆಲಸವನ್ನು ಸರಿಯಾಗಿ ಮಾಡಬೇಕೆಂದರೆ ಶರೀರದಲ್ಲಿ ಆರೋಗ್ಯ ಚೆನ್ನಾಗಿರಬೇಕು. ಇವೆಲ್ಲವೂ ಸಾಧಿಸಬೇಕೆಂದರೆ ಕುಟುಂಬ ನಮ್ಮ ಬೆನ್ನಿಗೆ ನಿಲ್ಲಬೇಕು. ಎಲ್ಲರ ಸಹಕಾರ ಬೇಕು. ಹಾಗಾಗಿ 10, 000 ಬರೀ ಸಂಖ್ಯೆಯಲ್ಲ, ಅದು ಜೀವನದ ವ್ಯಾಖ್ಯಾನ.
ಪ್ರಜ್ವಲ್ ಸಿ.
ಮಂಗಳೂರು