ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಅವರ ʼಆದಿಪುರುಷ್ʼ ರಿಲೀಸ್ ಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಜೂ.16 ರಂದು ಪ್ಯಾನ್ ಇಂಡಿಯಾ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.
ತಿರುಪತಿಯಲ್ಲಿ ಅದ್ಧೂರಿಯಾಗಿ ಸಿನಿಮಾದ ಪ್ರೀ – ರಿಲೀಸ್ ಇವೆಂಟ್ ನಡೆದಿದೆ. ಅದೇ ಸಮಾರಂಭದಲ್ಲಿ ಫೈನಲ್ ಟ್ರೇಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಸಿನಿಮಾ ತಂಡ ಒಂದು ವಿಶೇಷವಾದ ಅನೌನ್ಸ್ ಮೆಂಟನ್ನು ಮಾಡಿತ್ತು. ಪ್ರತಿ ಥಿಯೇಟರ್ ನ ಒಂದು ಸೀಟು ಹನುಮಾನ್ ದೇವರಿಗೆ ಮೀಸಲಾಗಿ ಇಡಲಾಗುವುದೆಂದು ಹೇಳಿತ್ತು.
ರಾಮಾಯಣದ ಕಥೆಯನ್ನು ಆಧರಿಸಿರುವ ʼಆದಿಪುರುಷ್ʼ ಟ್ರೇಲರ್ ರಿಲೀಸ್ ಆದಾಗಿನಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸಿನಿ ಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ. ಇದೀಗ ʼಕಾಶ್ಮೀರ್ ಫೈಲ್ಸ್ʼ, ʼಕಾರ್ತಿಕೇಯ 2ʼ ಸಿನಿಮಾದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ʼಆದಿಪುರುಷ್ʼ ಸಿನಿಮಾದ ಕುರಿತು ಸ್ಪೆಷೆಲ್ ಅನೌನ್ಸ್ ಮೆಂಟ್ ಮಾಡಿದ್ದಾರೆ.
“ಆದಿಪುರುಷ್ʼ ಜೀವಮಾನದಲ್ಲಿ ಒಮ್ಮೆ ನೋಡಬಹುದಾದ ಸಿನಿಮಾ. ಇದನ್ನು ಎಲ್ಲರೂ ಸೇರಿ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ನನ್ನ ಭಕ್ತಿಯಿಂದ, ನಾನು ತೆಲಂಗಾಣದಾದ್ಯಂತ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ” ಎಂದು ನಿರ್ಮಾಪಕರು ಟ್ವೀಟ್ ಮೂಲಕ ಹೇಳಿದ್ದಾರೆ.
ಓಂ ರಾವುತ್ ನಿರ್ದೇಶನದ ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಶೇಷನಾಗಿ ಸನ್ನಿ ಸಿಂಗ್ ಮತ್ತು ಭಜರಂಗನಾಗಿ ದೇವದತ್ತ ನಾಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾವಣನಾಗಿ ಸೈಫ್ ಆಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ.