ಬಳ್ಳಾರಿ: ಅಗತ್ಯವಿರುವ ಕಲ್ಲಿದ್ದಲಿನ ಪೂರೈಕೆಯಲ್ಲಿ ಕೊರತೆ ಉಂಟಾದ ಪರಿಣಾಮ ಬಿಟಿಪಿಎಸ್ ವಿದ್ಯುತ್ ಉತ್ಪಾದನೆಗಾಗಿ ಹೆಣಗಾಡುತ್ತಿದೆ. ಅಲ್ಲದೇ, ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಸಂಗ್ರಹ ಪ್ರಮಾಣ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮಕ್ಕೆ ಪ್ರತಿದಿನ 1000 ಮೆಗಾವ್ಯಾಟ್ ವಿದ್ಯುತ್ ನೀಡಲು ಒಪ್ಪಂದ ಮಾಡಿಕೊಂಡಿದ್ದ ಬಿಟಿಪಿಎಸ್‌ಗೆ ಈಗ ಸಂಕಷ್ಟ ಎದುರಾಗಿದೆ.
ಬಿಟಿಪಿಎಸ್ ರಾಜ್ಯದ ವಿದ್ಯುತ್ ಜಾಲಕ್ಕೆ 1700 ಮೆ.ವ್ಯಾ. ವಿದ್ಯುತ್ ಪೂರೈಸುವ 500 ಮೆ.ವ್ಯಾ. ಸಾಮರ್ಥ್ಯದ ಎರಡು ಹಾಗೂ 700 ಮೆ.ವ್ಯಾ. ಸಾಮರ್ಥ್ಯದ ಒಂದು ಘಟಕ ಹೊಂದಿದೆ. ತನ್ನ ಸಾಮರ್ಥ್ಯದ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಬಿಟಿಪಿಎಸ್‌ಗೆ ಪ್ರತಿದಿನ 17 ಸಾವಿರ ಟನ್ ಕಲ್ಲಿದ್ದಲಿನ ಅಗತ್ಯ ಇದೆ. ಪ್ರಸ್ತುತ ಬಿಟಿಪಿಎಸ್‌ನಲ್ಲಿ ಕೇವಲ 9000 ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಇದರಿಂದ ಬಿಟಿಪಿಎಸ್‌ನ 500 ಮೆ.ವ್ಯಾ. ಸಾಮರ್ಥ್ಯದ ಒಂದು ಘಟಕವನ್ನು ಎರಡು ದಿನಗಳ ಕಾಲ ನಡೆಸಬಹುದಾಗಿದೆ. ನಂತರ ಪರಿಸ್ಥಿತಿ ಏನು ಎನ್ನುವ ಅನಿಶ್ಚಿತತೆ ಬಿಟಿಪಿಎಸ್ ಆಡಳಿತ ಮಂಡಳಿಯನ್ನು ಕಾಡುತ್ತಿದೆ.
ಕಾರಣ ಏನು?: ಬಿಟಿಪಿಎಸ್‌ನ 500 ಮೆ.ವ್ಯಾ. ಸಾಮರ್ಥ್ಯದ ಒಂದು ಘಟಕವನ್ನು ಒಂದು ದಿನ ಓಡಿಸಲು 5000 ಟನ್ ಕಲ್ಲಿದ್ದಲು ಬೇಕು. ಅಂದರೆ, 1700 ಮೆ.ವ್ಯಾ. ಸಾಮರ್ಥ್ಯದ 3 ಘಟಕಗಳನ್ನು ಓಡಿಸಲು 17,000 ಟನ್ ಕಲ್ಲಿದ್ದಲು ಬೇಕು. ಬಿಟಿಪಿಎಸ್‌ಗೆ ಸಿಂಗರೇಣಿ ಕೋಲ್ ಫೀಲ್ಡ್‌ನಿಂದ ನಿತ್ಯ 2 ರೈಲ್ವೆ ರೇಕುಗಳಲ್ಲಿ ತಲಾ 3,500 ಟನ್‌ನಂತೆ 7 ಸಾವಿರ ಟನ್ ಕಲ್ಲಿದ್ದಲು ಬರುತ್ತಿತ್ತು. ಆದರೆ, ಸಿಂಗರೇಣಿಯಿಂದ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಬಿಟಿಪಿಎಸ್‌ಗೆಂದೇ ಸಿಂಗರೇಣಿ ಕೋಲ್ ಮೈನ್ಸ್ ಪ್ರದೇಶದಲ್ಲಿ ಕಲ್ಲಿದ್ದಲಿನ ನಿಕ್ಷೇಪವನ್ನು ನಿಗದಿಪಡಿಸಿದ್ದು, ಅಲ್ಲಿಂದ ಕಲ್ಲಿದ್ದಲಿನ ಗಣಿಗಾರಿಕೆ ಇನ್ನೂ ಆರಂಭವಾಗಿಲ್ಲ. ಇದೇ ಕಲ್ಲಿದ್ದಲಿನ ಸಮಸ್ಯೆಗೆ ಮೂಲ ಎಂಬ ಮಾತುಗಳು ಕೇಳಿ ಬಂದಿವೆ.
ಕಲ್ಲಿದ್ದಲಿನ ಸರಬರಾಜು ಇಲ್ಲದೆ ಬಿಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತಿದ್ದು, ಇದರಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ವಿದ್ಯುತ್ ಸರಬರಾಜು ಖೋತಾ ಎದುರಿಸುತ್ತಿವೆ. ಬೇಸಿಗೆಯಲ್ಲಿ ಕಲ್ಲಿದ್ದಲು ಸಮರ್ಪಕವಾಗಿತ್ತು. ಆದರೆ ನೀರಿಲ್ಲದಾಗಿತ್ತು. ಆದರೆ ಈಗ ನೀರಿದೆ ಕಲ್ಲಿದ್ದಲು ಇಲ್ಲ. ಹೀಗಾಗಿ ನೀರು, ಕಲ್ಲಿದ್ದಲುಗಳ ಕೊರತೆಯಿಂದ ಬಿಟಿಪಿಎಸ್‌ನಲ್ಲಿ ನಿರೀಕ್ಷಿತ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ.
ಪ್ರಸ್ತುತ ಬಿಟಿಪಿಎಸ್‌ನ ಒಂದನೇ ಘಟಕದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಘಟಕಕ್ಕೆ ಕಲ್ಲಿದ್ದಲು ಕೊರತೆ ಇದೆ. ಒಡಿಶಾದ ಮಹಾನದಿ ಕೋಲ್ ಫೀಲ್ಡ್‌ನಿಂದ ಸಮುದ್ರ ಮಾರ್ಗದ ಮೂಲಕ ಆಂಧ್ರದ ಕೃಷ್ಣಪಟ್ಟಣಂ ಬಂದರಿಗೆ ಸರಕು ಸಾಗಾಣಿಕೆ ಹಡಗಿನಲ್ಲಿ ಬರುವ ಕಲ್ಲಿದ್ದಲನ್ನು ಬಿಟಿಪಿಎಸ್‌ಗೆ ತರಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಕಲ್ಲಿದ್ದಲಿನ ಸರಬರಾಜು ಸುಗಮವಾಗಬೇಕು. ಪ್ರಸ್ತುತ ಇಲ್ಲಿ ವಿದ್ಯುತ್ ಉತ್ಪಾದಿಸಲು ಆರ್‌ಟಿಪಿಎಸ್‌ನಿಂದ ಕಲ್ಲಿದ್ದಲು ಎರವಲು ಪಡೆಯಲಾಗುತ್ತಿದೆ.
– ಎಸ್.ಮೃತ್ಯುಂಜಯ, ಇಡಿ, ಬಿಟಿಪಿಎಸ್
– ಎಂ.ಮುರಳಿಕೃಷ್ಣ