Advertisement

1,000 ಮೆಗಾವ್ಯಾಟ್‌ ಸೌರಶಕ್ತಿ

12:04 AM Feb 02, 2020 | Lakshmi GovindaRaj |

ರೈಲ್ವೆ ಇಲಾಖೆಯಡಿ 2021-22ರ ವೇಳೆಗೆ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಸುಮಾರು 1,000 ಮೆಗಾವ್ಯಾಟ್‌ ಸೌರ ವಿದ್ಯುತ್‌ ಹಾಗೂ 200 ಮೆಗಾವ್ಯಾಟ್‌ ಪವನ ವಿದ್ಯುತ್‌ ಘಟಕಗಳ ಸ್ಥಾಪನೆ ನಿಟ್ಟಿನಲ್ಲಿ ಕೇಂದ್ರ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ರೈಲ್ವೆ ಆಯವ್ಯಯ ಒಳಗೊಂಡ ಸಾಮಾನ್ಯ ಆಯವ್ಯಯದಲ್ಲಿ ಭಾರತೀಯ ರೈಲ್ವೆಯ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.

Advertisement

ಇಲ್ಲಿಯವರೆಗೆ ರೈಲ್ವೆಗಳಲ್ಲಿ 100.99 ಮೆಗಾವ್ಯಾಟ್‌ ಸೌರ ಮತ್ತು 103.4 ಮೆಗಾವ್ಯಾಟ್‌ ಪವನ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲಾಗಿದೆ. ರೈಲುಗಳ ಸಂಚಾರಕ್ಕಾಗಿ ವಿದ್ಯುತ್‌ ಮತ್ತು ಡೀಸೆಲ್‌ ಬಳಸಲಾಗುತ್ತಿದೆ. 2018-19ರಲ್ಲಿ ರೈಲುಗಳ ಸಂಚಾರಕ್ಕಾಗಿ ಸುಮಾರು 18 ಶತಕೋಟಿ ಯುನಿಟ್‌ ವಿದ್ಯುತ್‌ (ದೇಶದ ಒಟ್ಟು ವಿದ್ಯುತ್‌ ಬಳಕೆಯ ಸುಮಾರು ಶೇ.1.27) ಮತ್ತು 3069.30 ಟನ್‌ ಕಿಲೋಲೀಟರ್‌ ಡೀಸೆಲ್‌ (2018-19ರಲ್ಲಿ) ಬಳಸಲಾಗಿದೆ.

ಶೇ.100 ವಿದ್ಯುದೀಕರಣ ಮತ್ತು ರೈಲುಗಳ ಸಂಖ್ಯೆ ಹೆಚ್ಚಳ ನಿಟ್ಟಿನಲ್ಲಿ ಸುಮಾರು 28-30 ಶತಕೋಟಿ ಯುನಿಟ್‌ ವಿದ್ಯುತ್‌ ಬಳಕೆ‌ ಅಂದಾಜಿಸಲಾಗಿದೆ. 2022-23ರ ವೇಳೆಗೆ 175 ಗೆಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆಗೆ ಯೋಜಿಸಲಾಗಿದೆ. ಸುಮಾರು 51,000 ಹೆಕ್ಟೇರ್‌ ರೈಲ್ವೆ ಭೂಮಿ ಲಭ್ಯವಿದ್ದು, ಅಗತ್ಯವಿದ್ದ ಕಡೆ ಘಟಕ ಸ್ಥಾಪಿಸಲಾಗುತ್ತದೆ. ಸೌರಶಕ್ತಿಯನ್ನು ಸಿಟಿಯು/ಎಸ್‌ಟಿಯು ಗ್ರಿಡ್‌ಗೆ ಅಥವಾ ನೇರವಾಗಿ 25 ಕೆವಿ ಎಸಿ ಬೋಗಿಗಳ ವ್ಯವಸ್ಥೆಗೆ ನೀಡಲಾಗುತ್ತದೆ.

5 ಕೆವಿಎ ಸಾಮರ್ಥಯದ 25 ಕೆವಿ ಎಸಿ ಎಳೆತ ವ್ಯವಸ್ಥೆಗೆ ನೇರವಾಗಿ ಸೌರಶಕ್ತಿ ನೀಡುವ ಪರಿಕಲ್ಪನೆಯನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಇದಲ್ಲದೆ ದಿವಾನಾ (ಹರಿಯಾಣ)ದಲ್ಲಿ 2 ಮೆಗಾವ್ಯಾಟ್‌ ಮತ್ತು ಬೈನಾ (ಎಂಪಿ)ದಲ್ಲಿ 1.7 ಮೆಗಾವ್ಯಾಟ್‌ನ 2 ಪೈಲಟ್‌ ಯೋಜನೆಗಳು ಕಾರ್ಯಗತಗೊಳಿಸುವ ವಿವಿಧ ಹಂತಗಳಲ್ಲಿದೆ ಮತ್ತು 2020ರ ಮಾರ್ಚ್‌ದೊಳಗೆ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ಭಾರತೀಯ ರೈಲ್ವೆ 50 ಮೆಗಾವ್ಯಾಟ್‌ ಲ್ಯಾಂಡ್‌ ಸೌರ ವಿದ್ಯುತ್‌ ಸ್ಥಾವರವನ್ನು ಛತ್ತೀಸಗಡದ ಬಿಲಾಯಿಯಲ್ಲಿ ಸ್ಥಾಪಿಸುತ್ತಿದ್ದು, ಇದು 2021ರ ಜನವರಿ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. 400 ಮೆಗಾವ್ಯಾಟ್‌ ಸೌರಶಕ್ತಿಯನ್ನು ಮಧ್ಯಪ್ರದೇಶದ ಜೆವಿ ಉರ್ಜಾ ವಿಕಾಸ ನಿಗಮ್‌ ಲಿಮಿಟೆಡ್‌ ಮತ್ತು ಸೌರಶಕ್ತಿ ನಿಗಮ (ಎಸ್‌ಇಸಿಐ) ಮೂಲಕ ರೇವಾ ಅಲ್ಟ್ರಾ ಮೆಗಾ ಸೋಲಾರ್‌ ಲಿಮಿಟೆಡ್‌ ಮೂಲಕ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 2020ರ ಜೂನ್‌ದಲ್ಲಿ ಟೆಂಡರ್‌ ಕರೆಯಲಾಗುತ್ತಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಮೇಲ್ಛಾವಣಿಯ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. 245 ಮೆಗಾವ್ಯಾಟ್‌ನ ಸೌರ ಸ್ಥಾವರಗಳು ವಿವಿಧ ಹಂತಗಳಲ್ಲಿ ಕಾರ್ಯಗತಗೊಳ್ಳುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next