ಬಸವಕಲ್ಯಾಣ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ತ ತಾಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ನಗರದ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ತಾಲೂಕು ಆಡಳಿತ ಸೌಧದವರೆಗೂ ಬೃಹತ್ ತಿರಂಗಾ ಯಾತ್ರಾ ರ್ಯಾಲಿ ಜರುಗಿತು.
ಬೆಳಗ್ಗೆ 8ಕ್ಕೆ ಆರಂಭಗೊಂಡ ರ್ಯಾಲಿ ಮಧ್ಯಾಹ್ನ 12ಕ್ಕೆ ತಾಲೂಕು ಸೌಧದ ಬಳಿ ಸಮಾಪ್ತಿಗೊಂಡಿತು. ರ್ಯಾಲಿ ಮೆರವಣಿಗೆಗೆ ಕೋಟೆ ಬಳಿ ಶಾಸಕ ಶರಣು ಸಲಗರ ಚಾಲನೆ ನೀಡಿದರು. ರ್ಯಾಲಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ಈ ವೇಳೆ 1000 ಮೀಟರ್ ಉದ್ದದ ರಾಷ್ಟ್ರಧ್ವಜ ಹಿಡಿದು ಸಾಗಿದ ಜನರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಹರ ಘರ ತಿರಂಗಾ ಯಾತ್ರೆ, ವಂದೇ ಮಾತರಂ, ಬೋಲೋ ಭಾರತ ಮಾತಾ ಕಿ ಜೈ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂಬ ಹಲವಾರು ಘೋಷಣೆ ಕೂಗಿದರು.
ಮೆರವಣಿಗೆ ವೇಳೆ ಶಾಸಕ ಶರಣು ಸಲಗರ ಸೇರಿದಂತೆ ಇತರರು ದೇಶ ಭಕ್ತಿಗೀತೆಗಳ ಹಾಡಿನ ಮೇಲೆ ಡಾನ್ಸ್ ಮಾಡಿ ಗಮನ ಸೆಳೆದರು. ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶಾಸಕರು ನೀರು, ಬಾಳೆಹಣ್ಣು, ಬಿಸ್ಕೇಟ್ ನೀಡಿದರು. ಅಲ್ಲದೇ ನಗರಸಭೆ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಚಾಕ್ ಲೆಟ್ ಸೇರಿ ಇತರೆ ಪದಾರ್ಥ ನೀಡಿದರು. ರಾಷ್ಟ್ರಧ್ವಜ ಹಿಡಿದ ವಿದ್ಯಾರ್ಥಿಗಳಿಗೆ ನಗರದ ಹರಳಯ್ಯ ವೃತ್ತದಲ್ಲಿ ಕೆಲವರು ಹೂವಿನ ಹಾರ ಹಾಕಿ ಸತ್ಕರಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಶಹಜಹಾನ ಶೇಖ್ ತನ್ವೀರ ಅಹ್ಮದ್, ಬಿಡಿಎ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪೂರ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಸಾವಿತ್ರಿ ಸಲಗರ, ನಗರಸಭೆ ಪೌರಾಯುಕ್ತ ಶಿವಕುಮಾರ, ತಾಪಂ ಇಒ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ. ಹಳ್ಳದ, ಸಿಪಿಐ ರಘುವೀರಸಿಂಗ್ ಠಾಕೂರ, ಪ್ರಮುಖರಾದ ಪ್ರದೀಪ ವಾತಾಡೆ, ಅಶೋಕ ವಕಾರೆ, ಅರವಿಂದ ಮುತ್ತೆ, ಬಾಬು ಹೊನ್ನಾನಾಯಕ, ಸೈಯದ್
ಯಶ್ರಬ್ ಅಲಿ ಖಾದ್ರಿ, ಜ್ಞಾನೇಶ್ವರ ಮುಳೆ, ಸಿದ್ದು ಬಿರಾದಾರ, ಎಂ.ಜಿ. ರಾಜೋಳೆ, ಇಂದ್ರಸೈನ್ ಬಿರಾದಾರ, ದೀಪಕ ಗಾಯಕವಾಡ, ಅಮೂಲ ಮೇತ್ರಸ್ಕರ, ನಿರ್ಮಲಾ ಶಿವಣಕರ ಸೇರಿದಂತೆ ಇತರರಿದ್ದರು.