ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಮತ್ತು ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮಾರಾಮಾರಿ ನಡೆದಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಹೆಚ್ಚತೊಡಗಿದೆ.
ಭ್ರಷ್ಟಾಚಾರ ಆರೋಪದ ಮೇಲೆ 2023ರ ಆಗಸ್ಟ್ ನಿಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿದ್ದು, ಬೆಂಬಲಿಗರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಭ್ರಷ್ಟಾಚಾರ, ದೇಶದ್ರೋಹ ಸೇರಿದಂತೆ 150ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಆಡಳಿತಾರೂಢ ಮೈತ್ರಿ ಪಕ್ಷಗಳ ರಾಜಕೀಯ ಕುತಂತ್ರದಿಂದ ಇಮ್ರಾನ್ ಖಾನ್ ಬಲಿಪಶುವಾಗಿದ್ದಾರೆಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದ್ದು, ಈಗಾಗಲೇ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಭಾನುವಾರ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (PTI) ಇಸ್ಲಾಮಾಬಾದ್ ನತ್ತ ಬೃಹತ್ ಜಾಥಾಕ್ಕೆ ಚಾಲನೆ ನೀಡಿ, ತಮ್ಮ ನಾಯಕ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಇಮ್ರಾನ್ ಪತ್ನಿ ಬುಶ್ರಾ ಬೀಬಿ ಹಾಗೂ ಇತರ ಹಿರಿಯ ಮುಖಂಡರು ಸೇರಿದಂತೆ ಸಾವಿರಾರು ಬೆಂಬಲಿಗರು ಇಸ್ಲಾಮಾಬಾದ್ ನತ್ತ ಮುನ್ನುಗ್ಗುತ್ತಿದ್ದಾರೆ.
ಟ್ರಸ್ಟ್ ಮೂಲಕ ಇಮ್ರಾನ್ ಖಾನ್ ಮತ್ತು ಪತ್ನಿ ಬುಶ್ರಾ ಬೀಬಿ ಲಂಚದ ರೂಪವಾಗಿ ಭೂಮಿಯನ್ನು ಪಡೆದಿರುವುದಾಗಿ ಆರೋಪಿಸಿ 2023ರಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿತ್ತು.
ಬಂಧನದ ನಂತರ ಭಾರೀ ಹಿಂಸಾಚಾರ, ದೊಂಬಿ ನಡೆದ ಪರಿಣಾಮ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಲಾಗಿದೆ. ಇಮ್ರಾನ್ ಖಾನ್ ಗೆ ನವೆಂಬರ್ ನಲ್ಲಿ ಜಾಮೀನು ಸಿಕ್ಕಿತ್ತು. ಆದರೆ ಇತರ ಆರೋಪಗಳನ್ನು ಎದುರಿಸುತ್ತಿದ್ದು, ಜಾಮೀನು ಲಭ್ಯವಾಗದ ಪರಿಣಾಮ ಜೈಲಿನಲ್ಲಿರುವುದಾಗಿ ವರದಿ ತಿಳಿಸಿದೆ.