Advertisement

26 ಸರ್ಕಾರಿ ಶಾಲೆಗೆ ಶೇ.100 ಫ‌ಲಿತಾಂಶ

02:41 PM May 03, 2019 | Team Udayavani |

ಕೋಲಾರ: ತಾಲೂಕಿನ 8 ಸರ್ಕಾರಿ ಪ್ರೌಢಶಾಲೆ ಸೇರಿದಂತೆ 26 ಶಾಲೆಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶದ ಸಾಧನೆ ಮಾಡಿದ್ದು, ಗುಣಾತ್ಮಕತೆಯಲ್ಲಿ ತಾಲೂಕು ಮುಂಚೂಣಿ ಯಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌. ನಾಗರಾಜಗೌಡ ತಿಳಿಸಿದರು.

Advertisement

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 2018ರಲ್ಲಿ ಕೇವಲ ಒಂದು ಸರ್ಕಾರಿ ಪ್ರೌಢಶಾಲೆ ಶೇ.100 ಸಾಧನೆ ಮಾಡಿತ್ತು. ಆದರೆ, ಈ ಬಾರಿ 8 ಸರ್ಕಾರಿ ಶಾಲೆಗಳು ಈ ಸಾಧನೆಯನ್ನು ತಮ್ಮದಾಗಿಸಿಕೊಂಡಿವೆ. ಉಳಿದಂತೆ 2 ಅನುದಾನಿತ ಹಾಗೂ 16 ಖಾಸಗಿ ಪ್ರೌಢಶಾಲೆಗಳು ಶೇ.100 ಸಾಧನೆ ಮಾಡಿದ್ದು, ಇದು ಕಳೆದ ಬಾರಿಗಿಂತ ಉತ್ತಮವಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಪ್ರಶಾಂತ್‌ ಪ್ರಥಮ: ಸರ್ಕಾರಿ ಶಾಲೆಗಳಲ್ಲಿ 611 ಅಂಕ ಪಡೆದಿರುವ ಕ್ಯಾಲನೂರು ಸರ್ಕಾರಿ ಪ್ರೌಢಶಾಲೆಯ ಎಂ.ಪ್ರಶಾಂತ್‌ ತಾಲೂಕಿಗೆ ಮೊದಲಿಗನಾಗಿದ್ದಾನೆ. ಉಳಿದಂತೆ ಮದನಹಳ್ಳಿ ಜೂನಿಯರ್‌ ಕಾಲೇಜಿನ ಭಾವನಾ 599, ಷಾಪೂರು ಸರ್ಕಾರಿ ಪ್ರೌಢಶಾಲೆಯ ಸಿ.ಎಸ್‌.ಅನುಷಾ 592 ಅಂಕ, ತೊರದೇವಂಡಹಳ್ಳಿ ಶಾಲೆಯ ಸಿ.ಎಸ್‌.ನಿತೀನ್‌-584 ಅಂಕ, ನರಸಾಪುರ ಪಿಯು ಕಾಲೇಜಿನ ಆರ್‌.ದಿವ್ಯಾ-583 ಅಂಕಗಳೊಂದಿಗೆ ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಅನುದಾನಿತ ಶಾಲೆಗಳಲ್ಲಿ ಸಬರಮತಿ ಪ್ರೌಢಶಾಲೆಯ ಎಂ.ಶ್ರೀರಾಮ್‌-613 ಅಂಕ, ಸುಭಾಷ್‌ಚಂದ್ರ-602 ಅಂಕ, ಮಣಿಘಟ್ಟ ಗ್ರಾಮೀಣಾಭಿವೃದ್ಧಿ ಶಾಲೆಯ ಎಂ.ಎನ್‌. ನರೇಂದ್ರ 593 ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಕೋಲಾರ ಪ್ರಥಮ: ಖಾಸಗಿ ಶಾಲೆಗಳಲ್ಲಿ ತಾಲೂಕಿನ ಸೀತಿಯ ಬಿಜಿಎಸ್‌ ಶಾಲೆಯ ಎ.ಎಸ್‌.ಮನು 623 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗನಾಗಿದ್ದಾನೆ, ಚಿನ್ಮಯ ಶಾಲೆಯ ಎಂ.ನಿತ್ಯ 621 ಅಂಕಗಳೊಂದಿಗೆ ದ್ವಿತೀಯ ಹಾಗೂ ಚಿನ್ಮಯ ಶಾಲೆಯ ಗಗನ್‌ ಹಾಗೂ ಶ್ರೀನಿವಾಸಪುರ ಬೈರವೇಶ್ವರ ಪ್ರೌಢಶಾಲೆಯ ಸಿರಿ ಆರ್‌.ಕುಲಕರ್ಣಿ 620 ಅಂಕಗಳನ್ನು ಗಳಿಸಿ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಬೋಧನೆ ಸಿಗುತ್ತಿದೆ ಎಂಬುದಕ್ಕೆ ಈ ಫಲಿತಾಂಶ ನಿದರ್ಶನವಾಗಿದ್ದು, ಈ ಬಾರಿ ಗಣಿತದಲ್ಲಿನ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು ಆರಂಭದಿಂದಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶೇ.100 ಸಾಧನೆಗೈದ ಶಾಲೆಗಳು: ಕೋಲಾರ ತಾಲೂಕಿನಲ್ಲಿ ಶೇ.100 ಫಲಿತಾಂಶ ಸಾಧನೆ ಮಾಡಿದ ಶಾಲೆಗಳೆಂದರೆ ಸರ್ಕಾರಿ ಪ್ರೌಢಶಾಲೆ ನರಸಾಪುರ, ಸರ್ಕಾರಿ ಪ್ರೌಢಶಾಲೆ ಮುದುವಾಡಿ, ಸರ್ಕಾರಿ ಪ್ರೌಢಶಾಲೆ ಅಣ್ಣಿಹಳ್ಳಿ,ಸರ್ಕಾರಿ ಪ್ರೌಢಶಾಲೆ ತೊರದೇವಂಡಹಳ್ಳಿ, ಸರ್ಕಾರಿ ಪ್ರೌಢಶಾಲೆ ತ್ಯಾವನಹಳ್ಳಿ, ಸರ್ಕಾರಿ ಪ್ರೌಢಶಾಲೆ ಸೂಲೂರು, ಸರ್ಕಾರಿ ಪ್ರೌಢಶಾಲೆ ಕಾಮಧನುಹಳ್ಳಿ, ಸರ್ಕಾರಿ ಪ್ರೌಢಶಾಲೆ ಹುತ್ತೂರು ಸೇರಿವೆ.

ಅನುದಾನಿತ ಶಾಲೆಗಳಾದ ಕೆಂಬೋಡಿಯ ಜನತಾ ಪ್ರೌಢಶಾಲೆ, ತೊಟ್ಲಿಯ ಶಾಂತಿನಿಕೇತನ ಶಾಲೆಗಳೂ ಶೇ.100 ಸಾಧನೆ ಮಾಡಿ ಗಮನ ಸೆಳೆದಿವೆ.

ಖಾಸಗಿ ಶಾಲೆಗಳು: ಗ್ರೀನ್‌ ವ್ಯಾಲಿ ಪಬ್ಲಿಕ್‌ ಶಾಲೆ ಬೆಗ್ಲಿಹೊಸಹಳ್ಳಿ, ಬಾಬಾ ಪ್ರೌಢಶಾಲೆ ಕಾರಂಜಿಕಟ್ಟೆ, ಕೋರಿನ್‌ ಶಾಲೆ ವಡಗೂರು, ರಾಮಕೃಷ್ಣ ವಿದ್ಯಾಮಂದಿರ ವಕ್ಕಲೇರಿ, ಯಲ್ಲಮ್ಮ ಮೊಮೋರಿಯಲ್ ಶಾಲೆ ಕೋಲಾರ, ಜ್ಞಾನಬೋಧ ಶಾಲೆ ನಡುಪಳ್ಳಿ, ಬಿಜಿಎಸ್‌ ಶಾಲೆ ಸೀತಿ, ಶಂಕರ ವಿದ್ಯಾಲಯ ಕೋಲಾರ, ಆರ್‌.ವಿ.ಇಂಟರ್‌ ನ್ಯಾಷನಲ್ ಶಾಲೆ ಕೋಲಾರ, ಸೂರ್ಯ ಪಬ್ಲಿಕ್‌ ಶಾಲೆ ನರಸಾಪುರ, ವ್ಯಾಲಿ ಪಬ್ಲಿಕ್‌ ಶಾಲೆ ನರಸಾಪುರ, ಸೆಂಟ್ಆನ್ಸ್‌ ಕೋಲಾರ, ಸಿ.ಮುನಿಸ್ವಾಮಿ ಪಬ್ಲಿಕ್‌ ಶಾಲೆ, ಬಸವೇಶ್ವರ, ಅರಾಭಿಕೊತ್ತನೂರು, ನ್ಯೂಜ್ಯೋತಿ ಶಾಲೆ ಭಟ್ರಹಳ್ಳಿ ಶೇ.100 ಸಾಧನೆ ಮಾಡಿದ ಶಾಲೆಗಳಾಗಿವೆ.

ಪೂರಕ ಪರೀಕ್ಷೆಗೆ ಸಿದ್ಧಗೊಳಿಸಿ

ತಾಲೂಕಿನ ವಿವಿಧ ಶಾಲೆಗಳಲ್ಲಿ ಅನುತ್ತೀರ್ಣರಾಗಿರುವ ಮಕ್ಕಳನ್ನು ಶಾಲೆಗೆ ಕರೆಸಿ ಜೂ.21 ರಿಂದ 28ರವರೆಗೂ ನಡೆಯಲಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಸೂಕ್ತ ಮಾರ್ಗದರ್ಶನ ನೀಡಿ ಸಿದ್ಧಗೊಳಿಸುವಂತೆ ತಾಲೂಕಿನ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಬಿಇಒ ನಾಗರಾಜಗೌಡ ತಿಳಿಸಿದರು.

ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲೆಗೆ ಬರುವಂತೆ ಸೂಚಿಸಿ, ವಿಷಯವಾರು ಶಿಕ್ಷಕರನ್ನು ರಜೆದಿನಗಳಲ್ಲೂ ಕರೆಸಿಕೊಂಡು ಆ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಾದ ಬೋಧನೆ ಒದಗಿಸಲು ಸೂಚಿಸಿರುವುದಾಗಿ ನುಡಿದರು.

ಈ ಸಂಬಂಧ ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಬೈರೆಡ್ಡಿ,ವೆಂಕಟಾಚಲಪತಿ, ಆರ್‌.ಶ್ರೀನಿವಾಸನ್‌, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್‌.ಚೌಡಪ್ಪ ಶಾಲೆಗಳಿಗೆ ಭೇಟಿ ನೀಡಿ ಅನುತ್ತೀರ್ಣ ವಿದ್ಯಾರ್ಥಿಗಳನ್ನು ಪೂರಕ ಪರೀಕ್ಷೆಗಳಿಗೆ ಸಿದ್ಧಗೊಳಿಸುತ್ತಿರುವ ಕುರಿತು ಗಮನ ಹರಿಸಲಿದ್ದಾರೆ ಎಂದು ತಿಳಿಸಿದರು.

ಡಿಸಿ,ಸಿಇಒಗೆ ಧನ್ಯವಾದ ಸಲ್ಲಿಕೆ: ಫಲಿತಾಂಶ ಉತ್ತಮಗೊಳಿಸಲು ಸೂಕ್ತ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಪಂ ಸಿಇಒ ಜಿ.ಜಗದೀಶ್‌, ಅಪರ ಡೀಸಿ ಪುಷ್ಪಲತಾ, ಡಿಡಿಪಿಐ ಕೆ.ರತ್ನಯ್ಯ, ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಶಿಕ್ಷಣ ಸಂಯೋಜಕರು, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next