ಅಗರ್ತಲಾ : ಭಾರತದ ಚುನಾವಣಾ ಆಯೋಗ ತ್ರಿಪುರದ ಎಲ್ಲ ಮತಗಟ್ಟೆಗಳ ಶೇ.100 ಅಂತರ್ಜಾಲ ನೇರ ಪ್ರಸಾರಕ್ಕೆ (ವೆಬ್ ಕ್ಯಾಸ್ಟಿಂಗ್) ಕ್ರಮ ಕೈಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಓ) ಶ್ರೀರಾಮ್ ತಾರಿಣಿಕಾಂತಿ ಇಂದು ಬುಧವಾರ ತಿಳಿಸಿದ್ದಾರೆ.
ವೆಬ್ ಕ್ಯಾಸ್ಟಿಂಗ್ ಗಾಗಿ ವಿಡಿಯೋ ಚಿತ್ರೀಕರಣ ಮತ್ತು ಕಣ್ಗಾವಲು ತಂಡಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗುವುದು. ಇವು ರಾಜ್ಯಾದ್ಯಂತ ಮತದಾನದ ದಿನದಂದು ಮತಗಟ್ಟೆಯೊಳಗಿನ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ. ಭದ್ರತೆಯನ್ನು ಕಾಪಿಡುವುದಕ್ಕಾಗಿ ಪರ್ಯಾಪ್ತ ಸಂಖ್ಯೆ ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಮೊಬೈಲ್ ತಂಡಗಳನ್ನು ನಿಯೋಜಿಸಲಾಗುವುದು. ಮತದಾನದ ದಿನಗಳಲ್ಲಿ ಶೇ.100 ವೆಬ್ ಕ್ಯಾಸ್ಟಿಂಗ್ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಸಿಇಓ ಹೇಳಿದರು.
ಸಂಬಂಧಿತ ಜಿಲ್ಲಾ ಮ್ಯಾಜಿಸ್ಟ್ರೇಟರು ತಮ್ಮ ಕಾರ್ಯಾಲಯದಲ್ಲಿ ಕುಳಿತು ಕೊಂಡೇ ಮತಗಟ್ಟೆಗಳಲ್ಲಿನ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸುವರು; ಅಂತೆಯೇ ಮತಗಟ್ಟೆಯಲ್ಲಿನ ನಿರ್ವಚನಾಧಿಕಾರಿಗಳು ವೆಬ್ ಕ್ಯಾಸ್ಟಿಂಗ್ ವಿಡಿಯೋ ಚಿತ್ರಿಕೆಗಳಿಗೆ ಪೂರಕವಾದ ಮಾಹಿತಿಗಳನ್ನು ಒದಗಿಸುವರು ಎಂದು ಸಿಇಓ ಹೇಳಿದರು.
ಎಲ್ಲೆಲ್ಲ ಇಂಟರ್‌ನೆಟ್ ಕವರೇಜ್ ಕಳಪೆಯಾಗಿರುವುದೋ ಅಲ್ಲೆಲ್ಲ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು ಮತ್ತು ರೆಕಾರ್ಡ್ ಮಾಡಲಾದ ವಿಡಿಯೋ ಚಿತ್ರಿಕೆಗಳನ್ನು ಅನಂತರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಒಪ್ಪಿಸಲಾಗುವುದು . ದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. ನೂರು ವೆಬ್ ಕ್ಯಾಸ್ಟಿಂಗ್ ಅನುಷ್ಠಾನಿಸುತ್ತಿರುವ ಏಕೈಕ ರಾಜ್ಯ ತ್ರಿಪುರ ಆಗಿದೆ ಎಂದು ಸಿಇಓ ಹೇಳಿದರು.
ತ್ರಿಪುರದಲ್ಲಿನ ಎರಡು ಲೋಕಸಭಾ ಕ್ಷೇತ್ರಗಳಾಗಿರುವ ಪೂರ್ವ ತ್ರಿಪುರ ಮತ್ತು ಪಶ್ಚಿಮ ತ್ರಿಪುರಕ್ಕೆ ಎ.11 ಮತ್ತು ಎ.18ರಂದು ಅನುಕ್ರಮವಾಗಿ ಚುನಾವಣೆ ನಡೆಯಲಿದೆ.