Advertisement

ಕಾಂಗ್ರೆಸ್‌ ಟಿಕೆಟ್‌ಗಾಗಿ 100 ಮಂದಿ ಅರ್ಜಿ: ಸಲೀಂ ಅಹಮದ್‌

07:30 PM Dec 13, 2022 | Team Udayavani |

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಸುಮಾರು 100 ಮಂದಿ ಅಲ್ಪಸಂಖ್ಯಾತ ಸಮುದಾಯದ ಟಿಕೆಟ್‌ ಆಕಾಂಕ್ಷಿಗಳು ಕೈ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ತಿಳಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ಹಂಚಿಕೆ ಕುರಿತಂತೆಯೂ ಚರ್ಚಿಸಲಾಗಿದ್ದು, ಹೈಕಮಾಂಡ್‌ಗೂ ಮನವಿ ಮಾಡಲಾಗುವುದು ಎಂದು ಹೇಳಿದರು.
ಒಂದು ಕಾಲದಲ್ಲಿ 17 ಮಂದಿ ಅಲ್ಪಸಂಖ್ಯಾತರು ಗೆದ್ದಿರುವ ಉದಾಹರಣೆಯಿದೆ. ಆದರೆ ಇದೀಗ ಅದು ಎರಡಂಕೆಯನ್ನೂ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯದವರಿಗೆ ಹೆಚ್ಚಿನ ಟಿಕೆಟ್‌ ನೀಡುವುದು ಸೇರಿ ಹಲವು ವಿಚಾರಗಳನ್ನು ಹೈಕಮಾಂಡ್‌ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಒಟ್ಟು ಐದು ವಲಯಗಳಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸಮಾವೇಶದ ವೇಳಾ ಪಟ್ಟಿ ಅಂತಿಮಗೊಳಿಸಲಾಗುವುದು ಎಂದರು.

ಹಲವು ರಾಜ್ಯಗಳಲ್ಲಿ ನಡೆದಿರುವ ಮತ ವಿಭಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ನೂರು ದಿನಗಳಲ್ಲಿ ಯಾವ ರೀತಿಯ ಯೋಜನೆ ಹಾಕಿಕೊಳ್ಳಬೇಕೆಂದು ಸಮಾಲೋಚನೆ ನಡೆಸಲಾಗಿದೆ. ಬಿಜೆಪಿಗೆ ಈಗಾಗಲೇ ಭಯ ಶುರುವಾಗಿದೆ. ಆ ಹಿನ್ನೆಲೆಯಲ್ಲಿಯೇ ಮುಸ್ಲಿಂ ಮತದಾರರನ್ನು ಮತ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯಕ್ಕೆ ಕೈಹಾಕಿದೆ ಎಂದು ಟೀಕಿಸಿದರು.

ಇದಕ್ಕೂ ಮುನ್ನ ಸಭೆ ನಡೆಸಿದ ಕಾಂಗ್ರೆಸ್‌ನ ಮುಸ್ಲಿಂ ಸಮುದಾಯದ ನಾಯಕರು, ಅಲ್ಪಸಂಖ್ಯಾತರ ಸಮಾವೇಶ, ಮತದಾರರ ಪಟ್ಟಿಯಿಂದ ಮುಸ್ಲಿಂ ಮತದಾರರನ್ನು ತೆಗೆದು ಹಾಕಿರುವುದು, ಮತ ವಿಭಜನೆ ತಡೆಗಟ್ಟುವುದು ಸೇರಿ ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ವಿಧಾನ ಸಭೆಯ ಉಪನಾಯಕ ಯು.ಟಿ ಖಾದರ್‌, ಮಾಜಿ ಸಚಿವ ನಜೀರ್‌ ಅಹಮದ್‌, ಶಾಸಕರಾದ ತನ್ವೀರ್ ಸೇಠ್, ಜಮೀರ್‌ ಅಹಮದ್‌ ಖಾನ್‌, ಕೇಂದ್ರ ಮಾಜಿ ಸಚಿವ ರೆಹಮಾನ್‌ ಖಾನ್‌, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಬ್ಟಾರ್‌ ಖಾನ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌, ರಹೀಂ ಖಾನ್‌, ಮಾಜಿ ಸಂಸದ ಐಜಿ ಸನದಿ ಸೇರಿ ಹಲವರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next