Advertisement

ಪ್ರತಿ ತಾಲೂಕಿನಲ್ಲಿ 100 ಆಕ್ಸಿಜನ್‌ ಬೆಡ್‌ ವ್ಯವಸ್ಥೆ

05:09 PM Aug 07, 2021 | Team Udayavani |

ಬಳ್ಳಾರಿ: ಕೋವಿಡ್‌ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿ ಕಾರಿಗಳಿಗೆ
ಕಟ್ಟುನಿಟ್ಟಿನ ಸೂಚನೆ ನೀಡಿದ ಸಂಪುಟ ದರ್ಜೆ ಸಚಿವ ಆನಂದಸಿಂಗ್‌ ಅವರು ಜಿಲ್ಲಾಡಳಿತ ವತಿಯಿಂದ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 100 ಆಕ್ಸಿಜನ್‌ ಸಹಿತ ಬೆಡ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯಾ ತಾಲೂಕು ರೋಗಿಗಳಿಗೆ ಆಯಾ ತಾಲೂಕು ವ್ಯಾಪ್ತಿಯಲ್ಲಿಯೇ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್‌ ಮೂರನೇ ಅಲೆ ತಡೆಗಟ್ಟುವಿಕೆಗೆ ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ 3ನೇ ಅಲೆ ಸಂಭಾವ್ಯದ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವೇಳೆ ಮೂರನೇ ಅಲೆ ಎದುರಾದಲ್ಲಿ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತಿ ತಾಲೂಕು ಆಸ್ಪತ್ರೆಗಳಿಗೆ 100 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. 15 ದಿನದಲ್ಲಿ ಇದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.

36 ಕೋವಿಡ್‌ ಆಸ್ಪತ್ರೆಗಳು: ಜಿಲ್ಲೆಯಲ್ಲಿ ಡೆಡಿಕೇಟೆಡ್‌ ಕೋವಿಡ್‌ ಹಾಸ್ಪಿಟಲ್‌ (ಡಿಸಿಹೆಚ್‌) ಹಾಗೂ ಡೆಡಿಕೇಟೆಡ್‌ ಕೋವಿಡ್‌ ಹೆಲ್ತ್‌ ಸೆಂಟರ್‌ (ಡಿಸಿಹೆಚ್‌ಸಿ) ಒಳಗೊಂಡಂತೆ ಒಟ್ಟು 36 ಕೋವಿಡ್‌ ಆಸ್ಪತ್ರೆಗಳಿದ್ದು, ಅವುಗಳಲ್ಲಿ 478 ಜನರಲ್‌ ಬೆಡ್‌, 2109 ಆಕ್ಸಿಜನ್‌ ಬೆಡ್‌, 117 ಐಸಿಯು ಬೆಡ್‌, 154 ಐಸಿಯು ಮತ್ತು ವೆಂಟಿಲೇಟರ್‌ ಬೆಡ್‌ಗಳನ್ನು ಒಳಗೊಂಡಂತೆ ಒಟ್ಟು 2858 ಬೆಡ್‌ಗಳು ಖಾಲಿಯಿವೆ. 40 ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಒಟ್ಟು 3170 ಬೆಡ್‌ಗಳು ಲಭ್ಯವಿವೆ ಎಂದು ಜಿಲ್ಲಾಕಾರಿ ಪವನಕುಮಾರ್‌ ಮಾಲಪಾಟಿ ಅವರು ಸಭೆಯಲ್ಲಿ ಸಚಿವರಿಗೆ ವಿವರಿಸಿದರು.

ನವೆಂಬರ್‌ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 13 ಲಕ್ಷ ಜನರು ಕೋವಿಡ್‌ ಮೊದಲ ಡೋಸ್‌ ಲಸಿಕೆ ಪಡೆಯಲಿದ್ದಾರೆ, ಇದರಲ್ಲಿ 6 ಲಕ್ಷ ಜನ
ಎರಡನೇ ಡೋಸ್‌ ಲಸಿಕೆ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.

ಒಂದು ನಿಮಿಷಕ್ಕೆ 3500 ಲೀಟರ್‌ ಆಕ್ಸಿಜನ್‌ ಉತ್ಪಾದನೆ: ವಿಮ್ಸ್‌ನಲ್ಲಿ ಒಂದು ನಿಮಿಷಕ್ಕೆ 1 ಸಾವಿರ ಲೀಟರ್‌ ಉತ್ಪಾದನೆಯ
ಆಕ್ಸಿಜನ್‌ ಫ್ಲಾಂಟ್‌, ಜಿಲ್ಲಾಸ್ಪತ್ರೆಯಲ್ಲಿ 500 ಲೀಟರ್‌ ಆಕ್ಸಿಜನ್‌ ಉತ್ಪಾದನೆ, ನ್ಯೂ ಡೆಂಟಲ್‌ ಕಾಲೇಜುನಲ್ಲಿ 160 ಲೀಟರ್‌ ಆಕ್ಸಿಜನ್‌ ಉತ್ಪಾದನೆ, ಹಡಗಲಿಯಲ್ಲಿ 500 ಲೀಟರ್‌ ಉತ್ಪಾದನೆಯ ಆಕ್ಸಿಜನ್‌ ಫ್ಲಾಂಟ್‌, ಜಿಂದಾಲ್‌ ವತಿಯಿಂದ ಹಗರಿಬೊಮ್ಮಹಳ್ಳಿ, ಸಿರುಗುಪ್ಪದಲ್ಲಿ ತಲಾ 500 ಲೀಟರ್‌ ಉತ್ಪಾದನೆಯ ಆಕ್ಸಿಜನ್‌ ಫ್ಲಾಂಟ್‌ ಒಳಗೊಂಡಂತೆ ಜಿಲ್ಲೆಯಲ್ಲಿ ಒಂದು ನಿಮಿಷಕ್ಕೆ 3500 ಲೀಟರ್‌ ಆಕ್ಸಿಜನ್‌ ಉತ್ಪಾದನೆ ಕ್ರಮಕೈಗೊಳ್ಳಲಾಗಿದೆ.

Advertisement

ಬಾಲ ಚೈತನ್ಯಕ್ಕೆ ಶಾಸಕರ ಮೆಚ್ಚುಗೆ: ಜಿಪಂ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ರೂಪಿಸಿದ ಬಾಲಚೈತನ್ಯ ಯೋಜನೆಗೆ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಸಂಡೂರು ಶಾಸಕ ತುಕಾರಾಂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಜನೆಯನ್ನು ಹೀಗೆ ಮುಂದುವರೆಸುವಂತೆ ಸಲಹೆ ನೀಡಿದರು. ಸಂಡೂರು ಶಾಸಕ ಇ. ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಮಾತನಾಡಿದರು.
ಕೋವಿಡ್‌ ಹಾಗೂ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್‌. ನಂದಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೊಟ್, ಅಪರ ಜಿಲ್ಲಾ ಧಿಕಾರಿ ಪಿ.ಎಸ್‌. ಮಂಜುನಾಥ, ಸಹಾಯಕ ಆಯುಕ್ತ ಆಕಾಶ್‌ ಶಂಕರ್‌, ಡಿಹೆಚ್‌ಒ ಡಾ| ಹೆಚ್‌.ಎಲ್‌. ಜನಾರ್ಧನ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಬಸರೆಡ್ಡಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next