ದಾವಣಗೆರೆ: ಸಾಮಾಜಿಕ ಜಾಲತಾಣದಿಂದ ವಂಚನೆಗೊಳಗಾಗುವ ಮಧ್ಯಮ ವರ್ಗದ ಕುಟುಂಬವೊಂದರ ಹೋರಾಟದ ಕಥಾ ಹಂದರ ಹೊಂದಿರುವ 100′ ಚಲನಚಿತ್ರ ನ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ನಾಯಕ ನಟ ರಮೇಶ ಅರವಿಂದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 100′ ಪೊಲೀಸ್ ಸಹಾಯವಾಣಿ ನಂಬರ್. ಚಿತ್ರದ ನಾಯಕ ಪೊಲೀಸ್ ಅಧಿಕಾರಿ. ಆತನ ಕುಟುಂಬ ಸಾಮಾಜಿಕ ಜಾಲತಾಣದ ವಂಚಕರ ವಂಚನೆಗೆ ಒಳಗಾಗುವುದು, ಅದರಿಂದ ಹೊರ ಬರುವ ಬಗೆ ಹೇಗೆ ಎಂಬುದರ ಮೇಲೆ ಚಿತ್ರ ಕಥೆ ಸಾಗುತ್ತದೆ. 100 ಪಕ್ಕಾ ಫ್ಯಾಮಿಲಿ ಥ್ರಿಲ್ಲರ್ ಚಿತ್ರ. ಎರಡು ಗಂಟೆಗಳ ಚಿತ್ರ ಕ್ಷಣದಿಂದ ಕ್ಷಣಕ್ಕೆ ಕುತೂಹಲ ಮೂಡಿಸುತ್ತದೆ. ಬಹಳ ಚೆನ್ನಾಗಿ ಸಿದ್ಧವಾಗಿದೆ. ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಮೂಲಕ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿತ್ರದ ನಾಯಕ ವಿಷ್ಣು ಮತ್ತು ಸೈಬರ್ ಕ್ರಿಮಿನಲ್ ಜತೆಗೆ ಸಾಗುವ ಕಥೆಯೇ 100. ಈ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರೆದ ಭಾಗದಂತಿದೆ. ತೆಲುಗಿನಲ್ಲಿ 100 ಸೈಬರ್ ಹೆಸರಿನಲ್ಲಿ ಚಿತ್ರ ಸಿದ್ಧವಾಗಿದೆ. ಕನ್ನಡದಲ್ಲಿ ಬಿಡುಗಡೆಯಾದ ನಂತರ ತೆಲುಗು ಚಿತ್ರ ಬಿಡುಗಡೆ ಮಾಡಲಾಗುವುದು. ವಿಶ್ವಾಸ್, ಗೌರವ್ ಎಂಬ ಹೊಸಬರನ್ನು ಪರಿಚಯಿಸಲಾಗಿದೆ. ಅತ್ಯುತ್ತಮ ತಂತ್ರಜ್ಞರ ತಂಡ, ಪ್ರತಿಭಾವಂತರ ಗುಂಪು ಚಿತ್ರಕ್ಕಾಗಿ ಕೆಲಸ ಮಾಡಿದೆ. ರಚಿತಾರಾಮ್ ಅವರೊಂದಿಗೆ ತೆಲುಗಿನ ಪೂರ್ಣ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಟೈಟಲ್ 100ಗೂ ಇಬ್ಬರು ನಾಯಕಿಯರಿಗೂ ಸಂಬಂಧವೇ ಇಲ್ಲ. ಆದರೂ ಚಿತ್ರ ನೋಡಿದಾಗ ಪ್ರತಿಯೊಂದು ಪಾತ್ರವೂ ಚಿತ್ರದ ಟೈಟಲ್‌ಗೆ ಹೊಂದಿಕೊಂಡೇ ಸಾಗುತ್ತದೆ. ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರದ ಕಥೆಗೆ ಪೂರಕವಾಗಿ ಬಂಡವಾಳ ಒದಗಿಸಿದ್ದಾರೆ ಎಂದರು.
ಮೊಬೈಲ್, ಇನ್‌ಸ್ಟಾಗ್ರಾಂ ಮನೆಯನ್ನೇ ಹೊಕ್ಕಿವೆ. ಒಂದೇ ಮನೆಯಲ್ಲಿ ಪ್ರತಿಯೊಬ್ಬರೂ ಕೈಯಲ್ಲಿರುವ ಮೊಬೈಲ್ ನೋಡುವುದರಲ್ಲೇ ಮುಳುಗಿ ಹೋಗಿರುವುದು ಸಾಮಾನ್ಯ ಎನ್ನುವಂತಾಗಿದೆ. ಸಾಮಾಜಿಕ ಜಾಲತಾಣಗಳು ಮಧ್ಯಮ ವರ್ಗದ ಕುಟುಂಬದ ಮೇಲೆ ಏನೆಲ್ಲ ಪರಿಣಾಮ ಉಂಟು ಮಾಡಬಲ್ಲದು. ಗೊತ್ತೋ, ಗೊತ್ತಿಲ್ಲದೆಯೋ ಆ ಕುಟುಂಬ ಸಾಮಾಜಿಕ ಜಾಲತಾಣದಿಂದ ಹೇಗೆ ವಂಚನೆಗೆ ಒಳಗಾಗಬಹುದು ಎಂಬುದನ್ನು 100 ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ನನ್ನ ಗೆಳೆಯನ ಜೀವನದಲ್ಲಿ ನಡೆದ ಘಟನೆಯನ್ನು ಕಥೆ ಮಾಡಲಾಗಿದೆ. ಇನ್ನುಳಿದ ಕಥೆಯನ್ನು ನಾನೇ ಸಿದ್ಧಪಡಿಸಿದ್ದೇನೆ. ಚಿತ್ರ ನೋಡಿದರೆ ನಮ್ಮ ಜೀವನದಲ್ಲೂ ಇದೇ ರೀತಿ ಇದೆಯೆಲ್ಲ ಎಂಬ ಭಾವನೆ ಬರುತ್ತದೆ. ಯಾವುದೇ ಚಿತ್ರ ನಮ್ಮ ಬದುಕಿಗೆ ಹತ್ತಿರವಾದ ಕಥೆ ಹೊಂದಿದ್ದಲ್ಲಿ ಚಿತ್ರ ಗೆದ್ದೇ ಗೆಲ್ಲುತ್ತದೆ. ತಮ್ಮ ರಾಮ ಶ್ಯಾಮ ಭಾಮ, ಅಮೆರಿಕ ಅಮೆರಿಕ ಇದೇ ಸೂತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದವು. ಜೀವನದ ಅನುಭವವೂ ಚಿತ್ರಕಥೆಯಲ್ಲಿ ಮೇಳೈಸುವಂತಾಗಬೇಕು ಎಂದರು.
ನಿರ್ಮಾಪಕ ಎಂ. ರಮೇಶ್ ರೆಡ್ಡಿ ಮಾತನಾಡಿ, 100′ ತಮ್ಮ ಮೂರನೇ ಚಿತ್ರ. ರಮೇಶ ಅರವಿಂದ ಒಳ್ಳೆಯ ಕಥೆಯನ್ನು ಬಹಳ ಸುಂದರವಾಗಿ ಮಾಡಿದ್ದಾರೆ. ಪ್ರತಿಯೊಬ್ಬರೂ ಚಿತ್ರ ನೋಡುವ ಮೂಲಕ ಆಶೀರ್ವದಿಸಬೇಕು ಎಂದು ಕೋರಿದರು.