Advertisement

ರಾಜ್ಯದಲ್ಲಿ 100 ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿ

11:23 AM Nov 13, 2017 | |

ಕಲಬುರಗಿ: ರೈತರಿಗೆ ತೋಟಗಾರಿಕೆ ಕೈಗೊಳ್ಳಲು ಅನುಕೂಲವಾಗುವ ಹಾಗೆ ತೋಟಗಾರಿಕೆ ವಿನೂತನ ತಂತ್ರಜ್ಞಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಹೇಳಲು ರಾಜ್ಯಾದ್ಯಂತ ಪ್ರಸಕ್ತ ವರ್ಷ 100 ತೋಟಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಸ್‌.ಬಿ. ದಿಡ್ಡಿಮನಿ ಹೇಳಿದರು.

Advertisement

ತೋಟಗಾರಿಕೆ ಇಲಾಖೆ, ಬೆಂಗಳೂರಿನ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ ಲಾಲಬಾಗ್‌ ಸಂಯುಕ್ತ ಆಶ್ರಯದಲ್ಲಿ ಚಿತ್ತಾಪುರ ತಾಲೂಕು ಗೋಳಾ ಕೆ. ಗ್ರಾಮದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಗೋಳಾ ಕೆ. ಮಾದರಿ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಗೋಳಾ ಕೆ. ಗ್ರಾಮದಲ್ಲಿ 26 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಇಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಮಾದರಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವ ಮೂಲಕ ತೋಟಗಾರಿಕೆ ಬೆಳೆಗಾರರಿಗೆ ವೈಜ್ಞಾನಿಕ ತಿಳಿವಳಿಕೆ, ವಿನೂತನ ತಂತ್ರಜ್ಞಾನದ ಮಾಹಿತಿ ನೀಡುವುದರ ಜತೆಗೆ ಮಾವು, ಚಿಕ್ಕು, ನೇರಳೆ, ಬಾರಿ ತಳಿಗಳ ಸಸಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಲಾಗುವುದು ಎಂದು ಹೇಳಿದರು.

ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ರೈತರು ಫಲ-ಪುಷ್ಪ ಕೃಷಿಯಲ್ಲಿ ತೊಡಗಲು ಅನುಕೂಲವಾಗುವ ಹಾಗೆ ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ಹಲವಾರು ಯೋಜನೆ ರೂಪಿಸಿದೆ. 

ತೋಟಗಾರಿಕೆಯಲ್ಲಿ ತೊಡಗುವುದ ರಿಂದ ರೈತರಿಗೆ ದೀರ್ಘ‌ಕಾಲದವರೆಗೆ ಆದಾಯ ದೊರೆಯುತ್ತದೆ. ತೋಟಗಾರಿಕೆ ವಿನೂತನ ತಂತ್ರಜ್ಞಾನದ ಕುರಿತು ರೈತರು ಎಲ್ಲ ಮಾಹಿತಿ ಪಡೆಯಬೇಕು ಎಂದು ಹೇಳಿದರು.

Advertisement

ತೋಟಗಾರಿಕೆ ಉಪನಿರ್ದೇಶಕ ಮಹಮ್ಮದ್‌ ಅಲಿ ಮಾತನಾಡಿ, ಗೋಳಾ ಕೆ. ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಕೊಳವೆಬಾವಿ, ಸೋಲಾರ್‌ ಪಂಪಸೆಟ್‌, ತೋಟಗಾರರ ಕೊಠಡಿ, ತಂತಿಬೇಲಿ, ತೆರೆದ ಬಾವಿ ದುರಸ್ತಿ, ವಿದ್ಯುತ್‌ ಸಂಪರ್ಕ, 2000 ಚದರ ಅಡಿ ಸಂರಕ್ಷಿತ ಬೇಸಾಯಕ್ಕಾಗಿ ನೆರಳು ಪರದೆ ಘಟಕ ನಿರ್ಮಾಣ ಹಾಗೂ 9 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ತಾಕುಗಳಿಗೆ ಹನಿ ನೀರಾವರಿ ಕಲ್ಪಿಸುವಂಥಹ ಮೂಲಭೂತ ಸೌಕರ್ಯ ಒದಗಿಸಲಾಗುವುದು. 

ತಲಾ ಎರಡು ಹೆಕ್ಟೇರ್‌ಗಳಲ್ಲಿ ಮಾವು, ನೇರಳೆ, ಸೀಬೆ ಹಾಗೂ ತಲಾ ಒಂದು ಹೆಕ್ಟೇರ್‌ನಲ್ಲಿ ಸೀತಾಫಲ, ಬಾರೆ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಿಸಲಾಗುವುದು. ಮಾವು, ನೇರಳೆ, ಸೀತಾಫಲ ಹಾಗೂ ಅಪಲ್‌ ಬರ್‌ ಹಣ್ಣಿನ ಬೆಳೆಗಳ ವಂಶಾವಳಿ ತಾಕುಗಳನ್ನು ನಿರ್ಮಿಸಲಾಗುವುದು. ನುಗ್ಗೆ, ನಿಂಬೆ ಹಾಗೂ ಕರಿಬೇವಿನ ತಲಾ 5000 ಸಸಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಕೃಷಿಹೊಂಡ, ಕ್ಷೇತ್ರಬದು ಮತ್ತು ಬಯೋಫೆನ್ಸಿಂಗ್‌ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕ ಜಿ. ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ತೊನಸನಹಳ್ಳಿ ಗ್ರಾಪಂ ಅಧ್ಯಕ್ಷ ಮಹ್ಮದ್‌ ಅಲಿ ಹಳ್ಳಿ, ಮುಖಂಡರಾದ ವಿಜಯಕುಮಾರ, ದೆವೇಂದ್ರ ಕಾರೊಳ್ಳಿ, ರಾಜೇಶ ಹೊನಗುಂಟಿಕರ, ಶಾಮ ದಂಡಗುಂಡಕರ, ಸಾಹೇಬಗೌಡ, ವಿಶ್ವಾರಾಧ್ಯ ಬಿರಾಳ, ಮರಲಿಂಗ ಕಮರಟಗಿ, ಭೀಮೇಗೌಡ, ಶರಣಬಸಪ್ಪ ಇಂಗಿನಶೆಟ್ಟಿ, ನಿಂಗಣ್ಣ ತಡಶೆಟ್ಟಿ, ಜಂಟಿ ನಿರ್ದೇಶಕರ ಕಚೇರಿ ಸಹಾಯಕ ರಾಘವೇಂದ್ರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಬಿ. ಮಕುಲ್‌ ಹುಸೇನ್‌, ಸಹಾಯಕ ತೋಟಗಾರಿಕೆ ನಿರ್ದೇಶಕ ಶಂಕರಗೌಡ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next