ಕಾಸರಗೋಡು: ತಲಪಾಡಿಯಲ್ಲಿ 100 ಹೆಲ್ಪ್ ಡೆಸ್ಕ್ ಗಳು ಮೇ 4ರಿಂದ ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ರಾ. ಹೆ.ಗಳಾಗಿರುವ 66, 47, 48ರ ಮೂಲಕ ಕೇರಳ ಮೂಲದ ವ್ಯಕ್ತಿಗಳು ಊರಿಗೆ ಮರಳುವ ಸಾಧ್ಯತೆಗಳಿದ್ದು, ಅವರ ಆರೋಗ್ಯ ತಪಾಸಣೆ ಸಹಿತ ಸೌಲಭ್ಯಗಳಿಗಾಗಿ ಹೆಲ್ಪ್ ಡೆಸ್ಕ್ ಕಾರ್ಯಾಚರಿಸಲಿವೆ ಎಂದು ಅವರು ತಿಳಿಸಿದರು.
ಬೆಳಗ್ಗೆ 8ರಿಂದ ತಲಪಾಡಿಯ ಚೆಕ್ ಪೋಸ್ಟ್ ನಲ್ಲಿ 100 ಹೆಲ್ಪ್ ಡೆಸ್ಕ್ ಗಳು’ಕಾರ್ಯಪ್ರವೃತ್ತವಾಗಲಿವೆ. ಕೋವಿಡ್ – 19 ತಡೆ ಚಟುವಟಿಕೆಗಳ ಅಂಗವಾಗಿ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಈ ಬಗ್ಗೆ ತಿಳಿಸಿದರು.
ಜಮ್ಮು-ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಬಿಹಾರ ಸಹಿತ ವಿವಿಧೆಡೆಗಳಿಂದ ಸುಮಾರು 4,500 ಮಂದಿ ಸರಕಾರದ ವೆಬ್ ಸೈಟ್‌ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.
ಕರ್ನಾಟಕದಿಂದ ಜಿಲ್ಲೆಯ ಗಡಿಗೆ ತಲುಪುವ ಪ್ರತಿ ವಾಹನಕ್ಕೆ ರಸ್ತೆ ಸಾರಿಗೆ ಅಧಿಕಾರಿ, ಪೊಲೀಸರು ಒಂದರಿಂದ 100ರ ವರೆಗಿನ ಟೋಕನ್ ಈ ವೇಳೆ ನೀಡುವರು. ಈ ಟೋಕನ್ ಪ್ರಕಾರ ಮಾತ್ರ ಹೆಲ್ಪ್ ಡೆಸ್ಕ್ ಗಳಿಗೆ ಕ್ಯಾಪ್ಟನ್/ಡ್ರೈವರ್ ದಾಖಲೆಗಳ ಸಹಿತ ಪರಿಶೀಲನೆಗಾಗಿ ತೆರಳಬೇಕು. ಯಾವುದೇ ರೀತಿಯ ರೋಗ ಲಕ್ಷಣಗಳು ಇದ್ದಲ್ಲಿ ತತ್‌ಕ್ಷಣ ವೈದ್ಯಾಧಿಕಾರಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ತಪಾಸಣೆ ಕೇಂದ್ರಕ್ಕೆ ಅವರನ್ನು ಒಯ್ಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇಂದಿನಿಂದ ವಿನಾಯಿತಿ ವಿಸ್ತರಣೆ
ಕಾಸರಗೋಡು ಜಿಲ್ಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ನೀಡಲಾಗಿದ್ದ ವಿನಾಯಿತಿಯನ್ನು ಮೇ 4ರಿಂದ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ವಿಸ್ತರಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.