ಬೆಂಗಳೂರು: ನೂರಕ್ಕೆ ನೂರರಷ್ಟು ಕಸ ವಿಂಗಡಣೆ ಯಾವ ನಗರದಲ್ಲೂ ಆಗುತ್ತಿಲ್ಲ. ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ನೂರಕ್ಕೆ ನೂರಷ್ಟು ವಿಂಗಡಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದಾದರು ನಗರದಲ್ಲಿ ನೂರಕ್ಕೆ ನೂರರಷ್ಟು ತ್ಯಾಜ್ಯವನ್ನು ವಿಂಗಡಿಸಲಾಗುತ್ತಿದೆ ಎಂದು ಹೇಳುತ್ತಿದ್ದರೆ ಅದೊಂದು ಸುಳ್ಳು ವದಂತಿ ಅಷ್ಟೇ. ಸಾಕಷ್ಟು ಪ್ರಯತ್ನ ಮಾಡಿದರೂ ನಗರದಲ್ಲಿ ಶೇ.40 ರಿಂದ 45 ಪ್ರಮಾಣದ ತ್ಯಾಜ್ಯವನ್ನು ವಿಂಗಡಿಸಲಾಗುತ್ತಿದೆ ಎಂದು ತಿಳಿಸಿದರು.
“ಘನತ್ಯಾಜ್ಯ ವಿಲೇವಾರಿ ನಿಯಮ-2016’ರಲ್ಲಿ ಶೇ.100 ಕಸ ವಿಂಗಡಣೆ ಸಾಧ್ಯ ಎಂಬ “ಪದ’ ಸೇರಿಸಲಾಗಿದೆ. ಆದರೆ, ವಾಸ್ತವದಲ್ಲಿ ಯಾವುದೇ ನಗರದಲ್ಲಿ ನೂರಕ್ಕೆ ನೂರಷ್ಟು ಕಸ ವಿಂಗಡಣೆ ಸಾಧ್ಯವಿಲ್ಲ. ಒಂದು ವೇಳೆ ಶೇ.100 ತ್ಯಾಜ್ಯ ವಿಂಗಡಣೆ ಮಾಡಲಾಗುತ್ತಿದೆ ಎಂದು ಯಾವುದಾದರು ನಗರದ ಅಧಿಕಾರಿಗಳು ಹೇಳಿದರೆ ಅದೊಂದು ಶುದ್ಧ ಸುಳ್ಳು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೀಡುವ ತ್ಯಾಜ್ಯವನ್ನು ಪೌರಕಾರ್ಮಿಕರು ಮಿಶ್ರಣ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಒಂದೇ ಆಟೋದಲ್ಲಿ ಹಸಿ, ಒಣ, ಹಾಗೂ ಸ್ಯಾನಿಟರಿ ತ್ಯಾಜ್ಯ ವಿಂಗಡಿಸಿದ ಮಾದರಿಯಲ್ಲಿ ಸಂಗ್ರಹಿಸುವುದಕ್ಕೆ ಇಂದೋರ್ ಮಾದರಿ ಪ್ರಾಯೋಗಿಕಕ್ಕೆ ಮುಂದಾಗಿದ್ದೇವೆ. ಇಂದೋರ್ ಮಾದರಿಯಲ್ಲಿ ರಾಕೆಟ್ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ.
ಸಮರ್ಪಕವಾಗಿ ತ್ಯಾಜ್ಯ ವಿಂಗಡಣೆ ಮಾಡುವುದೇ ಇದರ ಗುಟ್ಟು ಎಂದರು. ಇಂದೋರ್ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಆಟೋಗಳ ವಿನ್ಯಾಸ ಬದಲಾವಣೆ ಮಾಡಲಾಗುತ್ತಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯದ ಆಟೋ ಬಾಡಿ ನಿರ್ಮಿಸಲಾಗುತ್ತಿದೆ. ಒಂದೇ ಬಾರಿ ಎಲ್ಲ ಕಸ ಸಂಗ್ರಹಿಸುವುದಕ್ಕೆ ಸಾಧ್ಯವಾದಿದ್ದರೆ, ಮತ್ತೂಂದು ಟ್ರಿಪ್ ಹೋಗಿ ಸಂಗ್ರಹಿಸುವುದಕ್ಕೆ ಸೂಚಿಸ ಲಾಗುವುದು. ಶೇ.90ರಷ್ಟು ತ್ಯಾಜ್ಯ ವಿಂಗಡಿಸಿದರೂ ಉತ್ತಮ ಸಾಧನೆಯಾಗಿದೆ ಎಂದು ಹೇಳಿದರು.
ಇಂದೋರ್ ಮಾದರಿಯಲ್ಲಿ ಪ್ರತ್ಯೇಕವಾಗಿ ಕಸ ಸಂಗ್ರಹಿಸಿದರೂ, ಅದನ್ನು ಎಲ್ಲಿ ಸುರಿಯುತ್ತಾರೆ, ಯಾವ ಘಟಕಗಳಿಗೆ ಸಾಗಿಸಲಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಒಂದೇ ವಾಹನ ಎರಡು ಬಾರಿ ಬಂದರೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ.
-ಅಬ್ದುಲ್‌ವಾಜಿದ್, ಪಾಲಿಕೆ ಪ್ರತಿಪಕ್ಷದ ನಾಯಕ