ಮುಂಬಯಿ, ಆ.8: ಸಚಿವಾಲಯ ಸೇರಿದಂತೆ ರಾಜ್ಯದ ಇತರ ಸರಕಾರಿ ಕಟ್ಟಡಗಳ ಸುತ್ತಮುತ್ತಲಿನ ಪರಿಸರದಲ್ಲಿ ಇಇಎಸ್‌ಎಲ್ ಕಂಪೆನಿಯು 100 ಇ-ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಲೋಕೋಪಯೋಗಿ ಸಚಿವ ಡಾ| ಪರಿಣಯ ಫುಕೆ ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ನೀತಿಯ ಪ್ರಕಾರ, ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಕ್ತ ಜಾಗವನ್ನು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳಿಗೆ ಬಳಸಬೇಕು. ಮುಂಬಯಿ, ಪುಣೆ, ನಾಸಿಕ್, ಲೋಕೋಪಯೋಗಿ ಇಲಾಖೆ ಜಾಗ ಲಭ್ಯಗೊಳಿಸುವ ಬಗ್ಗೆ ಸಭೆ ನಡೆಸಲಾಯಿತು.
ಲೋಕೋಪಯೋಗಿ ಇಲಾಖೆಯ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಸಂದೀಪ್ ಪಾಟೀಲ್ ಮಾತನಾಡಿ, ಇಲಾಖೆಯಲ್ಲಿ ಐದು ಎಲೆಕ್ಟ್ರಿಕ್ ವಾಹನಗಳಿದ್ದು, ಅವು ಅತ್ಯಂತ ಪರಿಸರ ಸ್ನೇಹಿಯಾಗಿವೆ. ಇ-ಚಾರ್ಜಿಂಗ್ ಕೇಂದ್ರಗಳಿಗೆ 12 ಚದರ ಮೀ. ಸ್ಥಳಾವಕಾಶ ಬೇಕಾಗುತ್ತದೆ. ಈ ಚಾರ್ಜಿಂಗ್ ಸಾಧನವು ಅರ್ಧ ಘಂಟೆಯಲ್ಲಿ ಎಂಭತ್ತು ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಪ್ರತಿ ಯೂನಿಟ್ ಚಾರ್ಜಿಂಗ್‌ಗೆ ಆರರಿಂದ ಏಳು ರೂ. ಗಳಷ್ಟು ಆಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಕೈಗೆಟುಕುವ ದರವಾಗಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಎ ಎ ಸಾಗ್ನೆ, ವಾಶಿಮ್ ಜಿಲ್ಲೆಯ ಅಧೀಕ್ಷಕ ಎಂಜಿನಿಯರ್ ರಂಜಿತ್ ಹಂಢೆ ಮತ್ತು ಲೋಕೋಪಯೋಗಿ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಇ-ವಾಹನಗಳನ್ನು ಉತ್ತೇಜಿಸಲು ಪ್ರಸಕ್ತ ಅಕ್ಟೋಬರ್ ವೇಳೆಗೆ ಲೋಕೋಪಯೋಗಿ ಇಲಾಖೆ 14 ವಾಹನಗಳನ್ನು ಖರೀದಿಸಲಿದೆ ಎಂದು ಫುಕೆ ಹೇಳಿದರು. 2030 ರ ವೇಳೆಗೆ ರಾಜ್ಯದ ಎಲ್ಲ ವಾಹನಗಳು ಇ-ವೆಹಿಕಲ್ ಆಗಿರಲು ಇಲಾಖೆ ಪ್ರಯತ್ನಿಸುತ್ತಿದೆ. ಇ-ಚಾರ್ಜಿಂಗ್ ಕೇಂದ್ರವು ಎಲ್ಲ ಪಾರ್ಕಿಂಗ್ ಸ್ಥಳಗಳಲ್ಲಿದ್ದರೆ, ಅದು ಲಾಭವನ್ನು ಹೆಚ್ಚಿಸುತ್ತದೆ. ಎಲ್ಲಾ ಶಾಪಿಂಗ್ ಮಳಿಗೆಗಳಲ್ಲಿ ಇದು ಕಡ್ಡಾಯವಾಗಿದ್ದರೆ, ಪಾರ್ಕಿಂಗ್ ಕಾರುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಅದರ ಲಾಭವನ್ನು ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳ ಪರಿಕಲ್ಪನೆಯನ್ನು ಚಾಲನೆ ಮಾಡಿದರೆ, ಮುಂದಿನ ದಿನಗಳಲ್ಲಿ ಪರಿಸರವನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.