ಬೆಂಗಳೂರು: ಬಿಬಿಎಂಪಿಯ ಮೇಯರ್ ಆಗಿ ಎಂ.ಗೌತಮ್‌ಕುಮಾರ್ ಅಧಿಕಾರ ಸ್ವೀಕರಿಸಿ ಇಂದಿಗೆ (ಜ.8ಕ್ಕೆ) ನೂರು ದಿನವಾಗಿದೆ. ಮೇಯರ್ ಅಧಿಕಾರ ಅವಧಿ ಕೇವಲ ಒಂದು ವರ್ಷ ಆಗಿರುವುದರಿಂದ ನೂರು ದಿನಗಳ ಅವಧಿ ಮಹತ್ವ ಪಡೆದುಕೊಂಡಿದೆ.
ನೂರು ದಿನಗಳಲ್ಲಿ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಮೇಯರ್ ಸೈ ಎನಿಸಿಕೊಂಡಿದ್ದಾರೆ. ಅದೇ ರೀತಿ ತಾವೇ ಆದೇಶಿಸಿದ, ಸೂಚನೆ ನೀಡಿದ ಕೆಲಸಗಳು ಗಡವು ನೀಡಿದ ಅವಧಿಯಲ್ಲಿ ಪೂರ್ಣಗೊಳಿಸಲಾಗದೆ ಕೈ ಚೆಲ್ಲಿದ್ದಾರೆ. ಈ ಮಧ್ಯೆ ಸಾರ್ವಜನಿಕರು ಮತ್ತು ಪಾಲಿಕೆ ಸದಸ್ಯರ ಕೈಗೆ ಮೇಯರ್ ಸಿಗುತ್ತಿಲ್ಲ ಎನ್ನುವ ಆರೋಪವೂ ಚರ್ಚೆಗೆ ಕಾರಣವಾಗಿದೆ.
ನೂರು ದಿನ ಪೂರೈಸುವುದರ ಒಳಗಾಗಿ ನಗರದ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮೇಯರ್ ಆಶ್ವಾಸನೆ ನೀಡಿದ್ದರು. ಮೇಯರ್ ಅವರ ಮೊದಲ ಭರವಸೆಯೂ ಇದೇ ಆಗಿತ್ತು. ಆದರೆ, ಹಸಿ ಮತ್ತು ಒಣ ಕಸದ ಪ್ರತ್ಯೇಕ ಟೆಂಡರ್ ಪ್ರಕ್ರಿಯೆಯನ್ನು ಜಾರಿ ಮಾಡುವಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಘೋಷಣೆಗೆ ಸೀಮಿತವಾದ ಯೋಜನೆಗಳು: ಗಡವಿನೊಳಗೆ ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಗುಂಡಿ ಮುಚ್ಚದೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳುವುದು. ಬೆಳಗ್ಗೆ 6ಕ್ಕೆ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಆ ಮೂಲಕ ವಾರ್ಡ್ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಆದೇಶ ಕಾರ್ಯರೂಪಕ್ಕೆ ಬರಲಿಲ್ಲ.
ಪ್ರಮುಖ ನಿರ್ಧಾರಗಳು: ನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದೋರ್‌ಗೆ ಭೇಟಿ. ಪಾಲಿಕೆ ವ್ಯಾಪ್ತಿಯಲ್ಲಿನ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮೇಯರ್ ಆರೋಗ್ಯ ನಿಧಿಗೆ 15 ಕೋಟಿರೂ. ಬಿಡುಗಡೆ ಹಾಗೂ ಹಸಿ ತ್ಯಾಜ್ಯ
ಮೆಚ್ಚುಗೆ ಪಡೆದ ಮೇಯರ್ ನಡೆ : ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ಕನ್ನಡಕ್ಕೆ ಆದ್ಯತೆ ನೀಡಬೇಕು. ಇಲ್ಲವಾದರೆ ಉದ್ದಿಮೆಗಳು ಪರವಾನಗಿ ರದ್ದು ಪಡಿಸಲಾಗುವುದು ಎನ್ನುವ ಆದೇಶಕ್ಕೆ ಕನ್ನಡಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಇನ್ನು ನಗರಾಭಿವೃದ್ಧಿ ಇಲಾಖೆಯು ನಗರದಲ್ಲಿ ಜಾಹೀರಾತಿಗೆ ಮತ್ತೆ ಅವಕಾಶ ನೀಡಲು ತೆರೆಮರೆಯ ಸಿದ್ಧತೆ ನಡೆಸುತ್ತಿರುವುದಕ್ಕೆ ತೀಕ್ಷ್ಣವಾಗಿ ಮೇಯರ್ ಪತ್ರ ಬರೆದದ್ದೂ ಸುದ್ದಿಯಾಯಿತು. ಪಾಲಿಕೆ ನಿರ್ಣಯಕ್ಕೆ ವ್ಯತಿರಿಕ್ತವಾಗಿ ನಗರಾಭಿವೃದ್ಧಿ ಇಲಾಖೆ ನಿಯಮ ರೂಪಿಸಬಾರದು ಎಂದು ಪತ್ರ ಬರೆಯುವ ಮೂಲಕ ನಗರದಲ್ಲಿ ಮತ್ತೆ ಹೋರ್ಡಿಂಗ್ಸ್ ಪ್ರಸ್ತಾವನೆ ವಿರೋಧಿಸಿದರು.
–ಹಿತೇಶ್ ವೈ