ಬೆಳಗಾವಿ: ಪ್ರವಾಹದಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದ್ದು, ಉತ್ತರ ಮತ ಕ್ಷೇತ್ರದ ಪರಿಸ್ಥಿತಿ ಸುಧಾರಣೆಗಾಗಿ 100 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಶಾಸಕ ಅನಿಲ ಬೆನಕೆ ಆಗ್ರಹಿಸಿದರು.
ಸದ್ಯ ಮಳೆಯ ಅಬ್ಬರ ತಗ್ಗಿದ್ದರೂ ಇನ್ನೂ ಅನೇಕ ತಗ್ಗು ಪ್ರದೇಶಗಳು, ಬಡಾವಣೆಗಳು ಪ್ರವಾಹದ ಸಂಕಷ್ಟದಿಂದ ಹೊರ ಬಂದಿಲ್ಲ. ಅ ಪ್ರದೇಶಗಳಲ್ಲಿ ಅನಾರೋಗ್ಯ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಸಾಂಕ್ರಾಮಿಕ ಕಾಯಿಲೆ ವೇಗವಾಗಿ ಪಸರಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಬಡಾವಣೆಗಳಲ್ಲಿ ಕಾಯಿಲೆ ನಿಯಂತ್ರಣ ಔಷಧ ಸಿಂಪಡಿಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರವಾಹದಿಂದ ಹಾನಿಗೊಳಗಾದ ಶಿವಾಜಿನಗರ, ವೀರಭದ್ರನಗರ, ಫುಲ್ಬಾಗ ಮಾಳ, ಕೋನವಾಳಗಲ್ಲಿ, ಪಾಟೀಲ ಮಾಳಾ, ಗ್ಯಾಂಗ್‌ವಾಡಿ, ವಡ್ಡರವಾಡಿ, ರುಕ್ಮಿಣಿನಗರದಲ್ಲಿ ಸಾವಿರಾರು ಜನ ನಿರಾಶ್ರಿತರಾಗಿದ್ದು, ಇವರ ಬದುಕು ಕಟ್ಟಿಕೊಡಲು ಸರಕಾರ ಬದ್ಧವಾಗಿದೆ.
ಧರ್ಮನಾಥ ಭವನ, ಅಂಬೇಡ್ಕರ ಭವನ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ದಾನಿಗಳ ನೆರವಿನಿಂದ ಊಟ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
Advertisement
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 146 ಮಿಮೀ. ಆಗಬೇಕಾಗಿದ್ದ ಮಳೆ ಪ್ರಮಾಣ ಕಳೆದ 15 ದಿನಗಳ ಅವಧಿಯಲ್ಲಿ 360 ಮಿಮೀ. ಸುರಿದಿದೆ. ಇಷ್ಟು ದೊಡ್ಡ ಮಳೆಯಿಂದ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕಾರಿ ದಾಖಲೆಗಳ ಪ್ರಕಾರ 150 ಮನೆಗಳಿಗೆ ಹಾನಿಯಾಗಿದೆ. ಆದರೆ ಸದ್ಯ ನಾವು ಮಾಡಿರುವ ಸಮೀಕ್ಷೆ ಪ್ರಕಾರ 300ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿರುವುದು ಕಂಡು ಬಂದಿದೆ. ರಸ್ತೆಗಳು, ದೊಡ್ಡ ಪ್ರಮಾಣದ ನಾಲಾಗಳು, ಗಟಾರುಗಳ ದುರಸ್ತಿಗೆ ಹಾಗೂ ಸಂಕಷ್ಟಕ್ಕೆ ಸಿಲುಕಿದ 10 ಸಾವಿರ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
Related Articles
Advertisement
ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ಮನೆಗಳ ಪುನರ್ ನಿರ್ಮಾಣಕ್ಕಾಗಿ ಐದು ಲಕ್ಷ ರೂ. ಸಹಾಯಧನ ಮಂಜೂರು ಮಾಡಲು ವಿನಂತಿಸಲಾಗಿದೆ. ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನನ್ನ ಎರಡು ತಿಂಗಳ ಶಾಸಕರ ಮಾಸಿಕ ವೇತನ 72 ಸಾವಿರ ರೂ. ನೀಡುವುದಾಗಿ ಶಾಸಕ ಅನಿಲ ಬೆನಕೆ ಘೋಷಿಸಿದರು.
ಪರಿಹಾರ ಕಾರ್ಯಕ್ಕೆ 1 ಲಕ್ಷ ರೂ. ದೇಣಿಗೆ:
ಬೆಳಗಾವಿ ನಗರದ ಕಚೇರಿಗಲ್ಲಿಯಲ್ಲಿರುವ ಗುರು ವಿವೇಕಾನಂದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿಯಿಂದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1 ಲಕ್ಷ ರೂ. ಚೆಕ್‌ನ್ನು ಶಾಸಕ ಅನಿಲ್ ಬೆನಕೆ ಅವರಿಗೆ ಈ ಸಂದರ್ಭದಲ್ಲಿ ನೀಡಲಾಯಿತು. ಸೊಸೈಟಿ ಅಧ್ಯಕ್ಷ ಡಾ. ನಾರಾಯಣ ನಾಯ್ಕ, ಮುನಿರಾಜ ಜೈನ್, ಆನಂದ ರಾವ್, ರಾಜೇಶ ಗೌಡ, ಅಂಜನಕುಮಾರ ಗಂಡಗುದ್ರಿ, ಮಹಾವೀರ ಜೈನ್, ಆನಂದ ಶೆಟ್ಟಿ, ವಿಶಾಲ ಪಾಟೀಲ, ಭಾರತಿ ಡಿ. ಶೆಟ್ಟಿಗಾರ, ಜಗದೀಶ ಹೆಗ್ಡೆ, ಗಣೇಶ ಮರಕಾಲ, ಪಿಗ್ಮಿ ಸಂಗ್ರಹಕಾರರು, ಸಿಬ್ಬಂದಿ ಇದ್ದರು.