Advertisement

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

01:19 AM Jun 16, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಏರಿಕೆ ಬಿಸಿ ಸಾರಿಗೆ ನಿಗಮಗಳಿಗೆ ತುಸು ಜೋರಾಗಿಯೇ ತಟ್ಟಲಿದ್ದು, ಅದರಲ್ಲೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೇ 100 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ!

Advertisement

ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ. 14.34ರಿಂದ ಶೇ. 18.44ಕ್ಕೆ ಹೆಚ್ಚಿಸಲಾಗಿದೆ. ಪರಿಣಾಮ ಪ್ರತಿ ಲೀಟರ್‌ಗೆ 3 ರೂ. ಏರಿಕೆಯಾಗಿದ್ದು, ಇದನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿತ್ಯ ಬಳಸುವ ಡೀಸೆಲ್‌ಗೆ ಲೆಕ್ಕಹಾಕಿದರೆ, ಈ ಎರಡೂ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ 100 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕೆಎಸ್‌ಆರ್‌ಸಿಯು ನಿತ್ಯ 6.20 ಲಕ್ಷ ಲೀಟರ್‌ ಡೀಸೆಲ್‌ ಬಳಸಲಾಗುತ್ತದೆ. ಸಗಟು ಡೀಸೆಲ್‌ ಖರೀದಿಸುವುದರಿಂದ ಬೆಲೆ ತುಸು ಕಡಿಮೆ ಆಗುತ್ತದೆ. ಅದರಂತೆ ಮಾರಾಟ ತೆರಿಗೆ ಹೆಚ್ಚಳದಿಂದ ಪ್ರತಿ ಲೀಟರ್‌ಗೆ 2.94 ರೂ. ಹೆಚ್ಚುವರಿ ಹೊರೆ ಆಗಲಿದೆ. ಒಟ್ಟಾರೆ

ನಿತ್ಯ ಖರೀದಿಯಾಗುವ ಡೀಸೆಲ್‌ಗೆ ಲೆಕ್ಕಹಾಕಿದರೆ ದಿನಕ್ಕೆ 18.22 ಲಕ್ಷ ರೂ. ಹೊರೆ ಆಗಲಿದ್ದು, ವಾರ್ಷಿಕ 65 ಕೋಟಿ ರೂ. ಆಗುತ್ತದೆ.

ಸಮರ್ಪಕವಾಗಿ ಆಗದ ಹಿಂಪಾವತಿ
ಬಿಎಂಟಿಸಿಯು ನಿತ್ಯ 3 ಲಕ್ಷ ಲೀಟರ್‌ ಡೀಸೆಲ್‌ ಖರೀದಿಸುತ್ತಿದ್ದು, ಮಾಸಿಕ 2.70 ಕೋಟಿ ರೂ. ಹೊರೆ ಆಗುತ್ತದೆ. ವರ್ಷಕ್ಕೆ 36 ಕೋಟಿ ರೂ. ಹೆಚ್ಚುವರಿ ಹೊರೆ ಆಗುತ್ತದೆ. ಸರಕಾರಿ ಬಸ್‌ಗಳಲ್ಲಿ ಕಳೆದ ಒಂದು ವರ್ಷದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, “ಶಕ್ತಿ’ ಯೋಜನೆಯಡಿ ಸರಕಾರದಿಂದ ಆ ಹಣ ವಾಪಸ್‌ ಬರಲಿದೆ. ಈ ಹಿನ್ನೆಲೆಯಲ್ಲಿ ತುಸು ನಿಟ್ಟುಸಿರು ಬಿಡಬಹುದು. ಆದರೆ ಈ ಹಿಂಪಾವತಿ ನಿಯಮಿತವಾಗಿ ಆಗುತ್ತಿಲ್ಲ. ಕಳೆದ ವರ್ಷದಲ್ಲೇ ಸರಕಾರ 950 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಹೆಚ್ಚಲಿದೆ ಒತ್ತಡ
ಈ ಮಧ್ಯೆ ಸಾರಿಗೆ ನೌಕರರ ವೇತನ ಪರಿಷ್ಕರಣೆ, ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ವೆಚ್ಚ, ಸಾಲ ಮರುಪಾವತಿಯಂತಹ ಹೊಣೆಗಾರಿಕೆಗಳಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆಗೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next