ಚಿಂಚೋಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾಕ್ಕೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳಿಗೆ ಪ್ರೇರಣೆ ನೀಡಿದ್ದರಿಂದ 100 ಕೋಟಿ ಜನರಿಗೆ ಕೋವಿಡ್ ಲಸಿಕೆ ಲಭಿಸಿದೆ ಎಂದು ತಾಪಂ ಇಒ ಅನಿಲಕುಮಾರ ರಾಠೊಡ ಹೇಳಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ವೈದ್ಯರ ತಂಡದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ಕಡೆ ಕೆಲಸ ಅರಸಿ ಗುಳೆ ಹೋಗಿದ್ದ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ಬಂದ ಸಂದರ್ಭದಲ್ಲಿ ಅವರಿಗೆ ಕ್ಯಾರಂಟೈನ್ ಮಾಡಲು ಸಮಾಜ ಕಲ್ಯಾಣ ಮತ್ತು ಬಿಸಿಎಂ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ಸಮಗ್ರ ಇಲಾಖೆಗಳ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ, ಆರೋಗ್ಯ ಸಿಬ್ಬಂದಿ ಪರಿಶ್ರಮದಿಂದ ಸಾಧನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಆಸ್ಪತ್ರೆಗೆ 50ಲಕ್ಷ ಮೌಲ್ಯದ ಉಪಕರಣ ವಿತರಣೆ
ತಾಲೂಕು ಆರೋಗ್ಯಾಧಿಕಾರಿ ಮಹ್ಮದ್ ಗಫಾರ ಅಹಮೆದ್ ಮಾತನಾಡಿ, ದೇಶದಲ್ಲಿ ವಿಜ್ಞಾನಿಗಳು 3ನೇ ಅಲೆ ಹಬ್ಬಲಿದೆ ಎಂದು ಎಚ್ಚರಿಕೆ ನೀಡಿದ್ದರು. ಕೋವಿಡ್ ಲಸಿಕೆ ನೀಡಿರುವುದರಿಂದ ಅದನ್ನು ಹತೋಟಿಗೆ ತರಲಾಗಿದೆ. ಲಸಿಕೆ ನೀಡುವಲ್ಲಿ ಜಿಲ್ಲೆಯಲ್ಲಿ ತಾಲೂಕು 2ನೇ ಸ್ಥಾನ ಪಡೆದಿದೆ. ಒಟ್ಟು 1,84,050 ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದ್ದು, ಶೇ. 71ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಡೋಸ್ 56,140 ಜನರಿಗೆ ನೀಡಲಾಗಿದ್ದು, ಒಟ್ಟು ಶೇ. 43ರಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಅಂಜುಮ ತಬ್ಸುಮ್ ಮಾತನಾಡಿ, ಜನರ ಮನವೊಲಿಸಿ ಲಸಿಕೆ ನೀಡಿ ಉತ್ತಮ ಸಾಧನೆ ಮಾಡಿರುವುದಕ್ಕೆ ಅಧಿಕಾರಿಗಳನ್ನು ಅಭಿನಂದಿಸಿದರು. ಸಿಡಿಪಿಒ ಗುರುಪ್ರಸಾದ, ಹಣಮಂತ ಭೋವಿ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಇಂಜಿನಿಯರ್ ದೇವೇಂದ್ರಪ್ಪ ಕೋರವಾರ, ಮಂಜುನಾಥ ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು. ಆಸ್ಪತ್ರೆ ಆಡಳಿತಾಧಿಕಾರಿ ಡಾ| ಸಂತೋಷ ಪಾಟೀಲ ಸ್ವಾಗತಿಸಿದರು, ಸುಧಾ ಕುಲಕರ್ಣಿ ವಂದಿಸಿದರು.