Advertisement

ಹಣ ಕೊಡಿಸಿದರೆ 100 ಕೋಟಿ ನಮಸ್ಕಾರ: ಸಿಎಂ ಸಿದ್ದರಾಮಯ್ಯ

12:46 AM Feb 22, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ನಮಗೆ ಬರಬೇಕಾದ ತೆರಿಗೆ ಪಾಲು ಮತ್ತು ಅನುದಾನವು ಕನ್ನಡಿಗರ ಹಣ. ಏಳು ಕೋಟಿ ಕನ್ನಡಿಗರ ಹಿತದೃಷ್ಟಿಯಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ. ಅದಕ್ಕೆ ಅಡ್ಡಿಪಡಿಸಿದರೆ ಜಗ್ಗುವುದಿಲ್ಲ-ಬಗ್ಗುವುದಿಲ್ಲ, ವಿಚಲಿತ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

Advertisement

ನಾಯಕತ್ವ ಯಾರದ್ದೇ ಇರಲಿ. ನಾವು ಹೋದಾಗ ಹಣ ಕೊಟ್ಟಿಲ್ಲ. ಬೇಕಿದ್ದರೆ ನಿಮ್ಮ ನಾಯಕತ್ವದಲ್ಲೇ ದಿಲ್ಲಿಗೆ ಹೋಗೋಣ. ತೆರಿಗೆ ಪಾಲು ಮತ್ತು ಸಹಾಯಧನ 50,257 ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ., 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಲಾದ 11,495 ಕೋಟಿ ರೂ. ಕೊಡಿಸಿ ಎಂದು ಸಿಎಂ ಕುಟುಕಿದರು.

ನಿಮಗೆ ಏಳು ಕೋಟಿ ಕನ್ನಡಿಗರ ಪರವಾಗಿ 100 ಕೋಟಿ ನಮಸ್ಕಾರ ಹಾಕುತ್ತೇನೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಬಿಜೆಪಿಯವರಿಗೆ ನೇರ ಸವಾಲು ಹಾಕಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆಗೆ ಉತ್ತರಿಸಿದ ಸಿಎಂ ಸುದೀರ್ಘ‌ 3.20 ತಾಸು ಮಾತನಾಡಿದರು. ಮಾತಿನುದ್ದಕ್ಕೂ ಕೇಂದ್ರ ಸರಕಾರದ ಮೇಲೆ ಸವಾರಿ ಮಾಡಿದ ಅವರು ಅಂಕಿ-ಅಂಶಗಳ ಸಹಿತ ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಎಳೆಎಳೆಯಾಗಿ ವಿವರಿಸಿದರು. ಆದರೆ ಇದನ್ನು ಅಲ್ಲಗಳೆದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರು ಹೇಳುತ್ತಿರುವುದೆಲ್ಲವೂ ಸತ್ಯಕ್ಕೆ ದೂರ. ತಮ್ಮ ವೈಫ‌ಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಲು ರಾಜ್ಯಪಾಲರ ಭಾಷಣ ಬಳಸಿಕೊಳ್ಳಲಾಗಿದೆ ಎಂದು ಸರಕಾರಕ್ಕೆ ಮಾತಿನೇಟು ಕೊಟ್ಟರು.

ಉತ್ತರ ಅರ್ಧಕ್ಕೆ ಮೊಟಕು; ಬಿಜೆಪಿ ಸಭಾತ್ಯಾಗ
ಮುಖ್ಯಮಂತ್ರಿಯವರು ಉತ್ತರ ನೀಡುತ್ತಿದ್ದಾಗ ವಿಪಕ್ಷ ನಾಯಕರು, ಇತರ ಸದಸ್ಯರು ಪದೇಪದೆ ಎದ್ದು ನಿಂತು ಆಕ್ಷೇಪಿಸುತ್ತಿದ್ದರು. ನಿಮ್ಮ ಆಕ್ಷೇಪಣೆಗಳಿದ್ದರೆ ಬರೆದಿಟ್ಟುಕೊಳ್ಳಿ. ಅಡ್ಡಿಪಡಿಸಬೇಡಿ. ಸಿಎಂ ಉತ್ತರ ಮುಗಿದ ಮೇಲೆ ವಿವರಣೆ ಕೇಳಿದರೆ ಉತ್ತರ ಕೊಡಿಸುವ ಜವಾಬ್ದಾರಿ ನನ್ನದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಬೇಸರಗೊಂಡ ಮುಖ್ಯಮಂತ್ರಿ ಉತ್ತರವನ್ನು ಅರ್ಧಕ್ಕೆ ಮೊಟಕು ಗೊಳಿಸಿ, ಉತ್ತರವನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು. ಇದರಿಂದ ಕೋಪಗೊಂಡ ವಿಪಕ್ಷ ಸದಸ್ಯರು, ಸಿಎಂ ಪಲಾಯನ ಮಾಡುತ್ತಿದ್ದಾರೆ. ನಾವು ವಿವರಣೆ ಕೇಳುತ್ತೇವೆ ಎಂಬ ಕಾರಣಕ್ಕೆ ಉತ್ತರ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ವೇಳೆ ಆಡಳಿತ-ವಿಪಕ್ಷಗಳ ನಡುವೆ ಮಾತಿನ ಜಟಾಪಟಿ ನಡೆಯಿತು. ವಿಪಕ್ಷಗಳು ಸಭಾತ್ಯಾಗ ನಡೆಸಿದವು. ಗದ್ದಲದ ನಡುವೆಯೇ ರಾಜ್ಯಪಾಲ ಭಾಷಣದ ಮೇಲಿನ ವಂದನಾ ನಿರ್ಣಯ ಅಂಗೀಕಾರಗೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next