ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಸೀಮಿತ ಯೋಜನೆಗಳು ಪ್ರಕಟಗೊಂಡರೂ ಕೆರೆಗಳ ಅಭಿವೃದ್ಧಿ, ಡಾ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕಗಳ ಹಾಗೂ ಜಿಲ್ಲೆಗಳ ಅಭಿವೃದ್ಧಿಗೆ ಸಿಎಂ ಕುಮಾರಸ್ವಾಮಿ ಭರಪೂರ ಅನುದಾನ ಕೊಟ್ಟಿರುವುದು ರಾಜ್ಯದ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುಕೂಲವಾಗಲಿದೆ.
ಜಿಲ್ಲೆಗೆ ಅನುಕೂಲ: ರಾಜ್ಯದಲ್ಲಿ ಸದಾ ಮಳೆ, ಬೆಳೆ ಕೊರತೆಯಿಂದ ಬರ ಎದುರಿಸುವ ಜಿಲ್ಲೆಯು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯು ಸಾಕಷ್ಟು ಹಿಂದುಳಿದಿದೆ. ಡಾ.ನಂಜುಂಡಪ್ಪ ವರದಿ ಆಧಾರದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದಿಗೂ ಹಿಂದುಳಿದಿರುವುದರಿಂದ ಸರ್ಕಾರ ಈ ಬಜೆಟ್‌ನಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಬರೋಬ್ಬರಿ 3010 ಕೋಟಿ ಮೀಸಲಿಟ್ಟಿದೆ.
ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದರಲ್ಲೂ ಶಿಕ್ಷಣ, ಆರೋಗ್ಯ, ಗ್ರಾಮೀಣ ಭಾಗದ ಮೂಲ ಸೌಕರ್ಯಗಳಿಗೆ ಈ ಅಭಿವೃದ್ಧಿ ಅನುದಾನ ಜಿಲ್ಲೆಗೆ ಪರೋಕ್ಷವಾಗಿ ವರವಾಗಲಿದೆ.
ಜಲ ಮರು ಪೂರ್ಣ ಕಾಮಗಾರಿ: ನೆರೆ ಜಿಲ್ಲೆ ಕೋಲಾರದಲ್ಲಿ ಮಾವು ಹಾಗೂ ಟೊಮೆಟೋ ಸಂಸ್ಕರಣ ಘಟಕ ಸ್ಥಾಪನೆಗೆ ಸರ್ಕಾರ ನಿರ್ಧರಿಸಿರುವುದು ಜಿಲ್ಲೆಯ ರೈತರಿಗೆ ಅನುಕೂಲವಾಗಲಿದ್ದು, ಮುಖ್ಯವಾಗಿ ಅಂತರ್ಜಲ ಅತಿಯಾದ ತಾಲೂಕುಗಳಲ್ಲಿ ಜಲ ಮರು ಪೂರ್ಣ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಕೂಡ ಅದಕ್ಕೆ ಸೇರಲಿದೆ.
ಇನ್ನೂ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ನಿಧಿ ಹೆಚ್ಚಳ, ಬಯಲು ಸೀಮೆ ಪ್ರದೇಶಕ್ಕೆ 95 ಕೋಟಿ ಹಣ ಮೀಸಲಿಟ್ಟಿರುವುದು, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯಧನ,ದ್ರಾಕ್ಷ್ಮಿ, ದಾಳಿಂಬೆ ಬೆಳೆಯುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿರುವುದು ಜಿಲ್ಲೆಯ ರೈತರಲ್ಲಿ ಸಾಕಷ್ಟು ಹರ್ಷ ತಂದಿದೆ. ಅದರಲ್ಲೂ ರೈತರ ಬೆಳೆ ಸಾಲ ಮನ್ನಾ ಯೋಜನೆಯಿಂದ ಕುಮಾರಸ್ವಾಮಿ ಅವರ ಬಜೆಟ್‌ಗೆ ಅನ್ನದಾತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.