ಪ್ರತಿ ಬಾರಿ ಸ್ಟಾರ್ ಚಿತ್ರಗಳು ಬಿಡುಗಡೆಗೊಂಡ ನಂತರ ಭರ್ಜರಿ ಯಶಸ್ವಿ ಕಾಣುವುದುಲ್ಲದೇ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಸೃಷ್ಟಿಸುವುದನ್ನು ಸಹಜವಾಗಿ ಕಾಣುತ್ತೇವೆ. ಆದರೆ, ಈ ವರ್ಷ ಸ್ಟಾರ್ ಚಿತ್ರಗಳ ಜೊತೆಗೆ ಸಣ್ಣ ಚಿತ್ರಗಳೂ ಸಹ ಪ್ರೇಕ್ಷಕರ ಮನಗೆದ್ದು ದಾಖಲೆಯ ಕಲೆಕ್ಷನ್ ಮಾಡಿಕೊಂಡಿವೆ.
ಬಾಲಿವುಡ್ ಜೊತೆಗೆ ಮಾಲಿವುಡ್ ಟಾಲಿವುಡ್ ಚಿತ್ರಗಳು 100 ಕೋಟಿ ರೂ. ಗಡಿ ದಾಟಿವೆ. ಕೇವಲ ಕಮರ್ಷಿಯಲ್ ಅಷ್ಟೇ ಅಲ್ಲದೇ ಕಂಟೆಂಟ್ ಇರುವ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಈವರೆಗೆ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಟಾಪ್ 10 ಚಿತ್ರಗಳಿವು: ಬಾಲಿವುಡ್‌ನ ಬಹುತಾರೆಯರ ಸಿನಿಮಾ “ಕಲ್ಕಿ 2898 ಎಡಿ’ ದೇಶಾದ್ಯಂತ ಹೆಸರು ಮಾಡಿದ್ದು, ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 1000 ಕೋಟಿ ರೂ. ಗಳಿಸಿರುವ ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಶೀಘ್ರ 1000 ಕೋಟಿ ರೂ. ಗಡಿ ದಾಟುವ ನೀರಿಕ್ಷೆಯಿದೆ.
ಹೃತಿಕ್ ರೋಶನ್, ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿರುವ “ಫೈಟರ್’ ಆಕ್ಷನ್ ಸಿನಿಮಾ 340 ಕೋಟಿ ರೂ. ಗಳಿಸಿದೆ. “ಸೂಪರ್ ಮ್ಯಾನ್’ ಥೀಮ್‌ನಲ್ಲಿ ಮೂಡಿಬಂದ “ಹನುಮಾನ್’ ತೆಲಗು ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದಿದ್ದು, ಈವರೆಗೆ 301 ಕೋಟಿ ರೂ. ಗಳಿಸಿಕೊಂಡಿದೆ.
ಉಳಿದಂತೆ ಮಲಯಾಳಂನ “ಮಂಜುಮೇಲ್ ಬಾಯ್ಸ’ 242 ಕೋಟಿ ರೂ., ಅಜಯ್ ದೇವಗನ್, ಆರ್. ಮಾಧವನ್ ನಟನೆಯ “ಸೈತಾನ್’ 210 ಕೋಟಿ ರೂ., ತೆಲುಗಿನ “ಗುಂಟೂರು ಖಾರಂ’ 172 ಕೋಟಿ ರೂ., ಮಲಯಾಳಂನ “ಆಡುಜೀವಿತಂ’ 158 ಕೋಟಿ ರೂ., “ಆವೇಶಂ’ 156 ಕೋಟಿ ರೂ., ಬಾಲಿವುಡ್‌ನ “ಕ್ರ್ಯೂ’ 150 ಕೋಟಿ ರೂ. ಹಾಗೂ “ತೆರಿ ಬಾತೋಂ ಮೇ ಐಸಾ ಉಲ್ಜಾ ಜಿಯಾ’ ಚಿತ್ರ 136 ಕೋಟಿ ರೂ. ಗಳಿಸಿಕೊಂಡಿದೆ.