ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 100 ವಿಮಾನ ನಿಲ್ದಾಣಗಳನ್ನು ತೆರೆಯಲು ಕೇಂದ್ರ ಸರಕಾರ ಉದ್ದೇಶಿಸಿದೆ.
ಸುಮಾರು 1 ಸಾವಿರ ಹೊಸ ವಿಮಾನ ಮಾರ್ಗಗಳನ್ನು ತೆರೆಯಲಾಗುತ್ತಿದ್ದು, ಸಣ್ಣ ನಗರಗಳು, ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.
ಈ ಕುರಿತ ಪ್ರಸ್ತಾವನೆ ತಯಾರಾಗಿದ್ದು, 2025ರ ವೇಳೆಗೆ ವಿಮಾನ ನಿಲ್ದಾಣಗಳು ಕಾರ್ಯಾಚರಿಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು 5 ಬಿಲಿಯನ್‌ನಷ್ಟು ಮೊತ್ತಕ್ಕೆ ಏರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದಾರೆ. ಅಲ್ಲದೇ ಜಾರುತ್ತಿರುವ ಆರ್ಥಿಕತೆಯನ್ನು ಹಿಡಿದು ಮೇಲೆತ್ತಲು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರಕಾರ ಯೋಜನೆಗಳನ್ನು ಹಾಕಿಕೊಂಡಿದೆ. ಇದರಿಂದ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಗಲಿದೆ ಮತ್ತು ವಿಮಾನ ನಿಲ್ದಾಣಗಳ ಸ್ಥಾಪನೆ ಈ ಯೋಜನೆಗಳ ಭಾಗವಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಚೀನ 2035ರ ವೇಳೆಗೆ 450 ವಾಣಿಜ್ಯ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ಹಾಕಿದೆ. ಅದೇ ಗುರಿಯನ್ನು ಗಮನಿಸಿರುವ ಭಾರತವೂ ಹೆಚ್ಚಿನ ವಿಮಾನ ನಿಲ್ದಾಣ ಸ್ಥಾಪನೆಗೆ ಮುಂದಾಗಿದೆ. ಜತೆಗೆ ವಾರ್ಷಿಕ 600 ಸ್ಥಳೀಯ ಪೈಲಟ್‌ಗಳನ್ನು ತರಬೇತುಗೊಳಿಸುವುದು, ದೇಶೀಯ ವಿಮಾನಗಳ ಸಂಖ್ಯೆಯನ್ನು 1200 ಕ್ಕೆ ಹೆಚ್ಚಿಸುವ ಆಲೋಚನೆಯಿದೆ.
ಮುಂದಿನ 5 ವರ್ಷಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ 7 ಸಾವಿರ ಕೋಟಿ ರೂ. ಹೂಡಿಕೆಯನ್ನೂ ಮಾಡಲು ಸರಕಾರ ತೀರ್ಮಾನಿಸಿದೆ.
ಇದರೊಂದಿಗೆ ಪ್ರತ್ಯೇಕ ಡ್ರೋನ್ ನೀತಿಯನ್ನು ಸರಕಾರ ಹೊರತರಲಿದ್ದು, 2021ರ ವೇಳೆಗೆ ಪ್ರತ್ಯೇಕ ಡ್ರೋನ್ ಕಾರಿಡಾರ್‌ಗಳು, ಸರಕು ಸಾಗಣೆಗೆ ಡ್ರೋನ್ ಬಳಕೆಯನ್ನು 2023ರ ವೇಳೆಗೆ ಬಳಸಲು ಅನುಮತಿ ನೀಡಲು ಸರಕಾರ ತೀರ್ಮಾನಿಸಿದೆ.