Advertisement

ದ.ಕ. ಜಿಲ್ಲೆಗೆ ಹೆಚ್ಚುವರಿ 100 ಪೊಲೀಸ್‌: ಎಸ್‌ಪಿ

07:00 AM Jul 30, 2017 | Team Udayavani |

– ಪ್ರತೀ ಠಾಣೆಗೆ ಕನಿಷ್ಠ ಆರು ಮಂದಿ

Advertisement

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತೀ ಠಾಣೆಗೆ ಕನಿಷ್ಠ ಆರು ಮಂದಿಯಂತೆ ನೂರು ಮಂದಿ ಹೆಚ್ಚುವರಿ ಸಿಬಂದಿ ನಿಯೋಜಿಸಲಾಗುವುದು. ಈ ಮೂಲಕ ಕಾನೂನು ಸುವ್ಯವಸ್ಥೆ ಬಲಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ. ಅವರು ಶನಿವಾರ ಬಂಟ್ವಾಳ ರೋಟರಿ ಕ್ಲಬ್‌ನಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಗ್ರಾಮಗಸ್ತು ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸ್ವೀಕರಿಸಿ ಮಾತನಾಡಿದರು.

ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ತಲಾ ಇಬ್ಬರಂತೆ ತರಬೇತಿ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ನೇಮಿಸಲಾಗಿದೆ, ಕಲ್ಲಡ್ಕ ಮತ್ತು ಫರಂಗಿಪೇಟೆಯಲ್ಲಿ ನಿಯೋಜಿತ ಹೊರಠಾಣೆಗಳನ್ನು ಪೂರ್ಣಪ್ರಮಾಣದ ಠಾಣೆಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮೆಲ್ಕಾರ್‌ ನಿವಾಸಿ ಎಂ.ಎನ್‌. ಕುಮಾರ್‌ ಕೇಳಿದ ಪ್ರಶ್ನೆಗೆ ಪೂರಕ ಉತ್ತರಿಸಿದ ಅಧೀಕ್ಷಕರು, ಯಾವುದೇ ಅಪಘಾತ ಪ್ರಕರಣಗಳಲ್ಲಿ ಗಾಯಾಳುಗಳನ್ನು ಮಾನವೀಯ ನೆಲೆಯಲ್ಲಿ ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿ ಶುಶ್ರೂಷೆ ಕೊಡಿಸುವುದು ಪ್ರತಿಯೊಬ್ಬನ ಜವಾಬ್ದಾರಿ. ಅಂಥವರನ್ನು ಅಪಘಾತ ಪ್ರಕರಣದ ಸಾಕ್ಷಿದಾರನಾಗಿ ಮಾಡುವ ಭಯ ಬೇಡ. ಈ ಬಗ್ಗೆ ಸ್ಥಳೀಯ ಠಾಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದರು.

ರಿಕ್ಷಾಗಳಲ್ಲಿ ನಿಯಮ ಮೀರಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು, ಪ್ರಯಾಣಿಕರನ್ನು ಸಾಗಿಸುತ್ತಾರೆ ಎಂದು ಮೆಸ್ಕಾಂ ಸಲಹೆಗಾರ ವೆಂಕಪ್ಪ ಪೂಜಾರಿ ಎಸ್ಪಿಯವರ ಗಮನ ಸೆಳೆದರು. ಮೆಲ್ಕಾರ್‌ನ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಟ್ರಾಫಿಕ್‌ ಸಿಬಂದಿಯನ್ನು ನೇಮಿಸಿ ಎಂದು ಮಾಜಿ ಕೌನ್ಸಿಲರ್‌ ದಾಮೋದರ್‌ ಒತ್ತಾಯಿಸಿದರು.

Advertisement

ಸಾಮಾಜಿಕ ಸೇವಾಕರ್ತ ವಿಶ್ವನಾಥ ಚೆಂಡ್ತಿಮಾರ್‌ ಮಾತನಾಡಿ, ಬಂಟ್ವಾಳ ಪೇಟೆ ರಸ್ತೆ ವಿಸ್ತರಣೆ, ಟ್ರಾಫಿಕ್‌ ಸಮಸ್ಯೆ ನಿವಾರಣೆ, ಪೊಲೀಸ್‌ ಸಮುದಾಯ ಭವನ ನಿರ್ಮಾಣ ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸಿ, ಈ ಹಿಂದಿನ ಎಸ್ಪಿ ಡಾ| ಶರಣಪ್ಪ ಪ್ರತೀ ತಾಲೂಕು ಕೇಂದ್ರದಲ್ಲಿ ಪೊಲೀಸ್‌ ಭವನ ನಿರ್ಮಾಣದ ಬಗ್ಗೆ ಸರಕಾರಕ್ಕೆ ಸಲ್ಲಿಸಿರುವ ಬಗ್ಗೆ ಗಮನ ಸೆಳೆದರು.

ಬಿ.ಸಿ.ರೋಡ್‌ ಸಂಚಾರ ಅಡಚಣೆ ಕುರಿತು ಬಿ.ಕೆ. ಇದಿನಬ್ಬ ಪ್ರಸ್ತಾವಿಸಿದರು. ಸದಾಶಿವ ಪ್ರಭು ಬಂಟ್ವಾಳ, ಸತೀಶ್‌ ಮೆಲ್ಕಾರ್‌, ಮುಸ್ತಾಫಾ ಮೊದಲಾದವರು ಹಲವಾರು ವಿಷಯಗಳನ್ನು ಅಧೀಕ್ಷಕರ ಗಮನಕ್ಕೆ ತಂದರು. ಬಂಟ್ವಾಳ ಎಎಸ್ಪಿ ಡಾ| ಅರುಣ್‌, ನಗರ ಠಾಣಾಧಿಕಾರಿ ರಕ್ಷಿತ್‌ ಗೌಡ, ಪ್ರೊಬೆಷನರಿ ಎಸ್‌ಐಗಳಾದ ಪ್ರಸನ್ನ, ಪ್ರವೀಣ್‌ ಕುಮಾರ್‌, ಮಾದೇಶ ಎಂ, ನಿತ್ಯಾನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.

 

ಪ್ರತೀ ಗ್ರಾಮಕ್ಕೂ ಬೀಟ್‌ 
ಜಿಲ್ಲಾದ್ಯಂತ ಜಾರಿಯಲ್ಲಿರುವ ಬೀಟ್‌ ಪೊಲೀಸ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಪ್ರತೀ ಗ್ರಾಮದಲ್ಲೂ ಅನುಷ್ಠಾನಕ್ಕೆ ತರಲಾಗುವುದು, ಕಾರಣಾಂತರಗಳಿಂದ ಕೆಲವೊಂದು ಗ್ರಾಮಗಳಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಪ್ರತೀ ಗ್ರಾಮದಲ್ಲೂ ಬೀಟ್‌ ಪೊಲೀಸ್‌ ವ್ಯವಸ್ಥೆಯ ಸಭೆಯನ್ನು ಈಗಾಗಲೇ ನಿಯುಕ್ತಿಗೊಳಿಸಿದ ಸಿಬಂದಿಯ ಉಸ್ತುವಾರಿಯಲ್ಲಿ ನಡೆಸಲಾಗುವುದು ಎಂದು ಎಸ್‌ಪಿ ವಿವರಿಸಿದರು.

ಗೌಪ್ಯತೆ: ಅನುಮಾನ ಬೇಡ
ಮುಸ್ಲಿಂ ಹೆಣ್ಣುಮಕ್ಕಳಂತೆ ಘೋಷ ಹಾಕಿಕೊಂಡು ಭಿಕ್ಷುಕರಂತೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸ್ಥಳೀಯ ಬೀಟ್‌ ಪೊಲೀಸರಿಗೆ ಅಥವಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಿ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next