Advertisement

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: ಭಟ್ಕಳದ 8 ಮಂದಿ ನತದೃಷ್ಟರು..

09:03 AM May 22, 2020 | mahesh |

ಭಟ್ಕಳ: ಮಂಗಳೂರಿನಲ್ಲಿ ವಿಮಾನ ದುರಂತಕ್ಕೆ ಬಲಿಯಾದವರಲ್ಲಿ 8 ಮಂದಿ ಭಟ್ಕಳದವರಿದ್ದು ಇವರಲ್ಲಿ ನಾಲ್ವರು ಹಾಗೂ ಮೂವರು ಪ್ರತ್ಯೇಕ ಒಂದೊಂದು
ಕುಟುಂಬದ ಸದಸ್ಯರಾಗಿದ್ದರು. ಇವರಲ್ಲಿ ಒಂದು ಕುಟುಂಬದವರು ದುಬೈಯಿಂದ ಆಗಮಿಸುವ ತಮ್ಮ ಸಂಬಂಧಿಕರನ್ನು ಇದಿರುಗೊಳ್ಳಲು ಮಂಗಳೂರಿಗೆ ತೆರಳಿದ್ದರು. ಸಂಬಂಧಿಕರ ಜತೆ ಸಂತಸದಲ್ಲಿ ಮರಳಬೇಕಾದವರು ಇದೀಗ ಅವರ ಶವಗಳೊಂದಿಗೆ ಭಟ್ಕಳಕ್ಕೆ ವಾಪಸಾಗಿದ್ದರು. ಇತ್ತ ಭಟ್ಕಳದಲ್ಲಿ ಸಂಬಂಧಿಕರು ಮನೆಗೆ ಬರುತ್ತಿದ್ದಾರೆಂಬ ಖುಷಿಯಲ್ಲಿರುವಾಗಲೇ ಶನಿವಾರ ಬೆಳಗ್ಗಿನ ಜಾವ ಆಘಾತಕಾರಿ ಸುದ್ದಿ ಬಂದಿತ್ತು.

Advertisement

ಭಟ್ಕಳದ ಬಂದರ ರಸ್ತೆಯ 1ನೇ ಕ್ರಾಸ್‌ನಲ್ಲಿರುವ ಜಾಫರ್‌ ದಾಮುದಿಯವರ ಪುತ್ರ ನಾಸಿರ್‌ ದಾಮುದಿ (48), ನಾಸಿರ್‌ ಅವರ ಮಕ್ಕಳಾದ ಬೀಬಿ ಸಾರಾ (11),
ಮುಹಮ್ಮದ್‌ ಶುಯೇಬ್‌ (8), ನಬೀಹಾ (6) ಈ ದುರಂತದಲ್ಲಿ ಸಾವಿಗೀಡಾಗಿದ್ದರು. ಜಾಫರ್‌ ದಾಮುದಿ ತಮ್ಮ ಜೀವಮಾನವಿಡೀ ದುಬೈಯಲ್ಲಿಯೇ ಕಳೆದಿದ್ದು, ವಿಶ್ರಾಂತ ಜೀವನ ನಡೆಸಲೆಂದು ಇತ್ತೀಚೆಗಷ್ಟೇ ಭಟ್ಕಳಕ್ಕೆ ಹಿಂದಿರುಗಿದ್ದರು.  ಅಲ್ಲಿ ಅವರ ಬಳಿಕ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಮಗ ನಾಸಿರ್‌ ದಾಮುದಿ ನೋಡಿಕೊಳ್ಳುತ್ತಿದ್ದರು. ನಾಸಿರ್‌ ಕಳೆದ ಎರಡು ತಿಂಗಳ ಹಿಂದೆ ಶಾಲೆಗೆ ರಜೆಯಿರುವುದರಿಂದ ಮಕ್ಕಳನ್ನು ಕರೆದುಕೊಂಡು ದುಬೈಗೆ ಹೋಗಿದ್ದು ಶಾಲೆ
ಆರಂಭವಾಗುವುದಕ್ಕೆ ಕೆಲವೇ ದಿನಗಳಿದ್ದುದರಿಂದ ಅವರನ್ನು ಬಿಡಲು ಭಟ್ಕಳಕ್ಕೆ ಬರುತ್ತಿದ್ದರು.

ತಬ್ಬಲಿಯಾದ ಪುಟ್ಟ ಮಗು : ಕಳೆದ ಆರು ತಿಂಗಳ ಹಿಂದೆಯಷ್ಟೇ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಇವರ ಪತ್ನಿ ಶಾರಿಕಾ ತೀರಿ ಹೋಗಿದ್ದರು. ಈಗ ಇವರ ಏಕೈಕ ಪುತ್ರ ಮುಹಮ್ಮದ್‌ ನೂಹ್‌ (3) ಮಾತ್ರ ಉಳಿದುಕೊಂಡಿದ್ದು ತಂದೆ, ತಾಯಿ, ಅಕ್ಕ, ಅಣ್ಣನನ್ನು ಕಳೆದುಕೊಂಡು ಅನಾಥನಾಗಿದ್ದ. ಈತನಿಗೆ ವೃದ್ಧ ಅಜ್ಜ ಮತ್ತು ಅಜ್ಜಿಯೇ ಆಸರೆಯಾಗಿದ್ದರು. ಇನ್ನೊಂದು ಕುಟುಂಬದ ಅಫ್ರಿನ್‌ ಮಹಮ್ಮದ್‌ ನೌಮಾನ್‌ ದಾಮುದಿ, ಅವರ ಪುತ್ರ ಅಬಾನ್‌ (3) ಹಾಗೂ ಅವರ ಕುಟುಂಬದ ಇನ್ನೋರ್ವ ಅಬ್ದುಲ್‌ ಬಾರ್‌ ಅಬ್ದುಲ್‌ ಗಫೂರ್‌ ದಾಮುದಿ (11) ಕೂಡಾ ಮೃತರಲ್ಲಿ ಸೇರಿದ್ದರು.

ಇಲ್ಲಿನ ಸಾಗರ ರಸ್ತೆಯ ಸರಕಾರಿ ಆಸ್ಪತ್ರೆಯ ಎದುರಿಗಿರುವ ಬೀಬಿ ಶರೀಫಾ ಅವರ ಪುತ್ರ ಫರ್ಹಾಸ್‌ ಉಸ್ಮಾನ್‌ (48) ಮೃತರಲ್ಲಿ ಸೇರಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿರುವ ಇವರು ಕಳೆದ 30 ವರ್ಷಗಳಿಂದ ದುಬೈಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಹುದ್ದೆಯನ್ನು ಬದಲಿಸಿದ್ದ ಇವರಿಗೆ ದುಬೈ ಎರ್‌ಪೋರ್ಟ್‌ನಲ್ಲಿ ಕೆಲಸ ಸಿಕ್ಕಿತ್ತು. ಹೊಸ ಕೆಲಸಕ್ಕೆ ಸೇರುವ ಮುನ್ನ ತಾಯಿ, ಪತ್ನಿ, ಮಕ್ಕಳನ್ನು ನೋಡಿ ಹೋಗುವ ತವಕದಿಂದ ಬಂದಿದ್ದ ಇವರಿಗೆ ವಿಧಿ ಮನೆ ಸೇರಲು ಬಿಡಲಿಲ್ಲ.

ಗುರುವಾರ ಮಧ್ಯಾಹ್ನ 3 ಗಂಟೆಗೆ ದೂರವಾಣಿಯಲ್ಲಿ ಮಾತನಾಡಿದ್ದನ್ನು ಮನೆ ಮಂದಿ ಈಗ ನೆನಪಿಸಿಕೊಂಡು ದುಃಖೀಸುತ್ತಿದ್ದರು. ಓರ್ವ ಪುತ್ರ 4 ಮಕ್ಕಳ ತಂದೆಯಾದ ಇವರು ಇಡೀ ಕುಟುಂಬದ ಆಧಾರಸ್ತಂಭವಾಗಿದ್ದರು. ಮದುವೆಗೆ ಬಂದ ಮಗಳು, ಚಿಕ್ಕ ಚಿಕ್ಕ ಗಂಡು ಮಕ್ಕಳೆಲ್ಲರನ್ನೂ ಆಗಲಿ ಎಲ್ಲರನ್ನೂ ಅನಾಥರನ್ನಾಗಿಸಿದ್ದರು.

Advertisement

(ಹತ್ತು ವರ್ಷದ ಹಿಂದೆ ಉದಯವಾಣಿ ದೈನಿಕದಲ್ಲಿ ಪ್ರಕಟವಾದ ವರದಿ)

Advertisement

Udayavani is now on Telegram. Click here to join our channel and stay updated with the latest news.

Next