ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ವೆಬ್‌ಸೈಟ್ ಸಹಿತ ಸರಕಾರಿ ಹುದ್ದೆಗಳ ನೇಮ ಕಾತಿ ಪರೀಕ್ಷೆಗಳ ವೇಳೆ ನಡೆಯುವ ಅಕ್ರಮಗಳಿಗೆ ಗರಿಷ್ಠ 10 ವರ್ಷ ಜೈಲು ಮತ್ತು 1 ಕೋಟಿ ರೂ. ದಂಡ ವಿಧಿಸುವ ನೂತನ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.
ಪ್ರಸ್ತುತ ಸರಕಾರಿ ಹುದ್ದೆಗಳಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ ಅಥವಾ ವಿವಿಧ ವ್ಯಕ್ತಿಗಳು, ಸಂಸ್ಥೆಗಳು ಎಸುಗುವ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟ ಕಾನೂನು ಇಲ್ಲ. ಕೇಂದ್ರ ಸಿಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಲೋಕಸಭೆಯಲ್ಲಿ “ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಮಸೂದೆ 2024′ ಅನ್ನು ಮಂಡಿಸಿದರು.
ತಪ್ಪಿತಸ್ಥರು ಸಂಘಟಿತ ಅಪರಾಧಗಳಲ್ಲಿ ತೊಡಗಿರುವುದು ದೃಢಪಟ್ಟಲ್ಲಿ ಕನಿಷ್ಠ 5ರಿಂದ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ, ಗರಿಷ್ಠ 1 ಕೋಟಿ ರೂ. ದಂಡ ವಿಧಿಸಲು ಅವಕಾಶವಿದೆ. ಪರೀಕ್ಷೆ ನಡೆಸಲು ಹೊಣೆ ಹೊತ್ತ ಸಂಸ್ಥೆಗಳು ಅಕ್ರಮದಲ್ಲಿ ತೊಡಗಿದ್ದರೆ 1 ಕೋಟಿ ರೂ. ದಂಡ ಮತ್ತು ಪರೀಕ್ಷಾ ವೆಚ್ಚ ವಸೂಲಿ ಮಾಡಲು ಅವಕಾಶವಿದೆ. ಸಂಘಟಿತ ಅಪರಾಧದ ಪಾತ್ರ ಇಲ್ಲದಿದ್ದರೆ, 3ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ 10 ಲಕ್ಷ ರೂ.ವರೆಗೂ ದಂಡ ವಿಧಿಸಲು ಅವಕಾಶವಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಡಿಎಸ್‌ಪಿ ಅಥವಾ ಎಎಸ್‌ಪಿ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಗಳೇ ತನಿಖೆ ನಡೆಸಬೇಕು ಎಂದು ನೂತನ ಮಸೂದೆಯಲ್ಲಿ ತಿಳಿಸಲಾಗಿದೆ.
ಲೋಕಸೇವಾ ಆಯೋಗ, ರಾಜ್ಯಗಳ ಸಾರ್ವಜನಿಕ ಸೇವಾ ಆಯೋಗಗಳು, ಸಿಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಬ್ಯಾಂಕಿಂಗ್ ಸಿಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಕೈಗೊಳ್ಳುವ ನೇಮಕಾತಿ ಪರೀಕ್ಷೆಗಳು ಈ ಮಸೂದೆಯಡಿ ಬರಲಿದೆ.
ಏನೇನು ಅಕ್ರಮ?
ಪ್ರಶ್ನೆಪತ್ರಿಕೆ ಸೋರಿಕೆ, ಹಣಕ್ಕಾಗಿ ನಕಲಿ ಪ್ರವೇಶಪತ್ರ ಅಥವಾ ನೇಮಕಪತ್ರ ವಿತರಣೆ, ನಕಲಿ ವೆಬ್‌ಸೈಟ್, ನಕಲಿ ಅಭ್ಯರ್ಥಿಗಳ ಹಾಜರಿ, ದಾಖಲೆಗಳನ್ನು ತಿರುಚುವುದು, ಮೆರಿಟ್ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ, ಉದ್ದೇಶಪೂರ್ವಕವಾಗಿ ಭದ್ರತ ವ್ಯವಸ್ಥೆ ಉಲ್ಲಂಘನೆ, ಪರೀಕ್ಷಾ ರ್ಥಿಗಳಿಗೆ ಸೀಟು ನಿಗದಿಪಡಿಸುವಲ್ಲಿ ಅಕ್ರಮ, ಕಂಪ್ಯೂಟರ್ ಜಾಲ ಅಥವಾ ಕಂಪ್ಯೂಟರ್ ಸಿಸ್ಟಮ್ ಹ್ಯಾಕ್ ಮಾಡುವುದು, ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸುವ ಕ್ರಮವನ್ನು ಪರೀಕ್ಷಾ ಅಕ್ರಮಗಳೆಂದು ನೂತನ ಮಸೂದೆಯಲ್ಲಿ ಪರಿಗಣಿಸಲಾಗಿದೆ.