Advertisement

ಛೇ..ಮಗುವಿಗೆ ಜನ್ಮ ನೀಡಿದ 10 ರ ಹರೆಯದ ರೇಪ್‌ ಸಂತ್ರಸ್ತೆ

03:59 PM Aug 17, 2017 | Team Udayavani |

ಚಂಡೀಗಢ : ಅತ್ಯಂತ ದಾರುಣ ಘಟನೆಯೊಂದರಲ್ಲಿ ಸುಪ್ರೀಂ ಕೋರ್ಟ್‌ ಗರ್ಭಪಾತ ಮಾಡಿಸಲು ಅಸಮ್ಮತಿ ತೋರಿದ್ದ 10 ರ ಹರೆಯದ ಅತ್ಯಾಚಾರ ಸಂತ್ರಸ್ತ ಬಾಲಕಿ ಗುರುವಾರ ಸೆಕ್ಟರ್‌ 32 ರಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. 

Advertisement

ಸಿಸೇರಿಯನ್‌ ಮೂಲಕ ಮಗು ಜನಿಸಿದ್ದು, ಇದೀಗ ಬಾಲಕಿಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾವ ನಿರಂತರವಾಗಿ ಅತ್ಯಾಚಾರ ನಡೆಸಿದ ಪರಿಣಾಮವಾಗಿ ಬಾಲಕಿ ಗರ್ಭ ಧರಿಸಿದ್ದಳು. ಗರ್ಭ ಧರಿಸಿ ತಿಂಗಳುಗಳು ಕಳೆದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಗರ್ಭಿಣಿಯಾಗಿರುವುದು ಕಂಡು ಬಂದಿತ್ತು. 

ಛೇ.. ಆಕೆಗೆ ಗರ್ಭಿಣಿ ಎನ್ನುವುದೇ ತಿಳಿದಿಲ್ಲ
ಅತ್ಯಂತ ನೋವಿನ ಸಂಗತಿ ಎಂದರೆ ಕಾಮುಕನ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಸಂತ್ರಸ್ತ ಬಾಲಕಿಗೆ ಮಗುವಿಗೆ ಜನ್ಮ ನೀಡಿದ ವಿಚಾರವೇ ತಿಳಿದಿಲ್ಲ. ನಿನ್ನ ಹೊಟ್ಟೆಯಲ್ಲಿ ದೊಡ್ಡ ಕಲ್ಲು ಇದೆ .ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯ ಬೇಕು ಎಂದು ನಂಬಿಸಲಾಗಿತ್ತು. ಆಕೆಯ ಪೋಷಕರು ಮಗುವನ್ನು ದತ್ತು ನೀಡಬೇಕೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. 

ಜುಲೈ ತಿಂಗಳಿನಲ್ಲಿ ಸಂತ್ರಸ್ತೆಯ ಗರ್ಭಪಾತಕ್ಕೆ ಸಮ್ಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು. ಬಾಲಕಿ ಈಗ ತುಂಬು ಗರ್ಭಿಣಿಯಾಗಿದ್ದು, ಈ ಸಮಯದಲ್ಲಿ ಆಕೆಗೆ ಗರ್ಭಪಾತ ಮಾಡಿದರೆ ಬಾಲಕಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಚಂಡೀಗಢದ ವೈದ್ಯಕೀಯ ಮಂಡಳಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ನೇತೃತ್ವದ ಪೀಠ, ಬಾಲಕಿಯ ಮನವಿಯನ್ನು ತಿರಸ್ಕರಿಸಿತ್ತು.

Advertisement

ಅಷ್ಟೇ ಅಲ್ಲದೆ, ಇಂತಹ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿರುವ ಕುರಿತು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತ್ತು. ಇಂತಹ ವಿಚಾರಗಳ ಕುರಿತು ಆದಷ್ಟು ಬೇಗ ಕಾನೂನು ತೀರ್ಮಾನ ತೆಗೆದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ರಾಜ್ಯದಲ್ಲೂ ಶಾಶ್ವತ ವೈದ್ಯಕೀಯ ಮಂಡಳಿ ಸ್ಥಾಪಿಸಬೇಕು. ಮಂಡಳಿ ಸ್ಥಾಪನೆಯ ಸಾಧ್ಯಾಸಾಧ್ಯತೆ ಕುರಿತು ಪರಿಶೀಲನೆ ನಡೆಸಿ, ವರದಿ ನೀಡುವಂತೆ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ಅವರಿಗೆ ಪೀಠ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next