Advertisement

10 ಸಾವಿರ ಉದ್ಯೋಗ ಸ‌ೃಷ್ಟಿ “ಪಂಜರ ಕೃಷಿ”

10:26 PM Aug 13, 2020 | mahesh |

ಮಂಗಳೂರು: ಮೀನುಗಾರಿಕಾ ಇಲಾಖೆಯು “ಪಂಜರ ಕೃಷಿ’ಗೆ ಒತ್ತು ನೀಡಲು ನಿರ್ಧರಿಸಿದ್ದು, ಈ ಮೂಲಕ ರಾಜ್ಯಾದ್ಯಂತ 10 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ವಿನೂತನ ಯೋಜನೆಗೆ ಮುಂದಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ “ಆತ್ಮನಿರ್ಭರ್‌ ಭಾರತ’ ಪರಿಕಲ್ಪನೆಯಡಿ ಮತ್ಸéಸಂಪದ ಯೋಜನೆ ಜಾರಿಗೊಳಿಸಲಾಗಿದ್ದು, ಇದರ ಮುಖೇನ ಪಂಜರ ಕೃಷಿಗೆ ಇಲಾಖೆ ಹೊಸ ಅವಕಾಶ ತೆರೆದಿಟ್ಟಿದೆ. ತಲಾ 100 ಜನರು ಭಾಗವಹಿಸಲು ಅವಕಾಶವಿರುವ 100 ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸುವ‌ ಮೂಲಕ ಸುಮಾರು 10,000 ಜನರಿಗೆ ಉದ್ಯೋಗ ದೊರಕಿಸಿಕೊಡುವ ಗುರಿಯಿದೆ.

ತರಬೇತಿ ಪಡೆದವರಿಗೆ ಮೀನುಗಾರಿಕಾ ಇಲಾಖೆಯಿಂದ ಕಿಸಾನ್‌ ಕಾರ್ಡ್‌ ಒದಗಿಸಲಾಗುತ್ತದೆ. ಜತೆಗೆ ಶೇ. 3ರ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ. ಮೀನು ಮರಿ ಸಾಗಾಟ/ಮಾರಾಟಕ್ಕೂ ಸಬ್ಸಿಡಿ ಅವಕಾಶವೂ ಇದೆ.

ಏನಿದು “ಪಂಜರ ಕೃಷಿ’?
ಸಿಹಿನೀರಿನಲ್ಲಿ, ಸಮುದ್ರದಲ್ಲಿ, ಹಿನ್ನೀರಿನಲ್ಲಿ, ಚೌಳು ನೀರಿನಲ್ಲಿ ಹಾಗೂ ಅಳಿವೆಗಳಲ್ಲಿ ಪಂಜರ ಮಾದರಿಯನ್ನು ನಿರ್ಮಿಸಿ ಮೀನು ಸಾಕುವುದೇ ಪಂಜರ ಕೃಷಿ. ಪಂಜರವು ಆಯತಾಕಾರದ ಚೌಕಟ್ಟು ಹೊಂದಿರುತ್ತದೆ. ಮೀನುಗಳು ಹೊರಹೋಗದಂತೆ ಹಿಡಿದಿಡಲು ಒಳಗೆ, ಪಂಜರದ ರಕ್ಷಣೆಗಾಗಿ ಹೊರಗೆ, ಪಕ್ಷಿಗಳನ್ನು ತಡೆಯಲು ಮೇಲ್ಭಾಗದಲ್ಲಿ ಬಲೆ ಅಗತ್ಯ. ರಾಜ್ಯವು 300 ಕಿ.ಮೀ. ಕರಾವಳಿ ತೀರ ಹೊಂದಿದ್ದು, ಇಲ್ಲಿ 8,000 ಹೆಕ್ಟೇರ್‌ ವಿಸ್ತೀರ್ಣ ಶುದ್ಧ ಉಪ್ಪು ನೀರಿನ ಅಳಿವೆಗಳು ಹಾಗೂ ಕೊಲ್ಲಿಗಳಿವೆ. ಜತೆಗೆ ಅಣೆಕಟ್ಟು, ಜಲಾಶಯಗಳ ಭಾಗದಲ್ಲಿಯೂ ಪಂಜರ ಕೃಷಿ ಸಾಧ್ಯ. ಹ್ಯಾಚರಿಯಿಂದ ಖರೀದಿಸಲಾದ ಸಣ್ಣ ಮೀನು ಮರಿಗಳನ್ನು, ನರ್ಸರಿ ಕೆರೆಗಳಲ್ಲಿ ಸುಮಾರು 2 ತಿಂಗಳು ಗ್ರೇಡಿಂಗ್‌ ಮಾಡಿ, 18-20 ಗ್ರಾಂ ಗಾತ್ರದವರೆಗೆ ಬೆಳೆದ ಮರಿಗಳನ್ನು ಪಂಜರದಲ್ಲಿ ಹಾಕಿ ಬೆಳೆಸಲಾಗುತ್ತದೆ.

ಸಮುದ್ರದಲ್ಲಿ ಪಂಜರದ ಕೃಷಿಯನ್ನು 1950ರಲ್ಲಿ ಪ್ರಥಮವಾಗಿ ಜಪಾನ್‌ನಲ್ಲಿ ಪ್ರಾರಂಭಿಸಲಾಗಿತ್ತು. ಭಾರತದಲ್ಲಿ 2007ರಲ್ಲಿ ವಿಶಾಖಪಟ್ಟಣದಲ್ಲಿ ಪಂಜರ ಕೃಷಿ ಆರಂಭವಾಯಿತು. ಪ್ರಸ್ತುತ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ, ಒರಿಸ್ಸಾ ಸೇರಿದಂತೆ ವಿವಿಧ ರಾಜ್ಯದಲ್ಲಿ ನಡೆಯುತ್ತಿದೆ.

Advertisement

ಪಂಜರ ಕೃಷಿ ಹೇಗೆ?
ಪಂಜರ ಸ್ಥಾಪಿಸುವ ಮೊದಲು, ನೀರಿನ ಆಳ, ತಳಭಾಗದ ರಚನೆ ಹಾಗೂ ನೀರಿನ ಚಲನೆಯ ವೇಗವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜಿಐ ಪೈಪುಗಳನ್ನು (6 ಮೀ.) ಹಾಗೂ ನೆಟ್ಲಾನ್‌ ರೋಲ್‌ಗ‌ಳನ್ನು ಉಪಯೋಗಿಸಿಕೊಂಡು ಪಂಜರ ಮಾಡಬೇಕು. ಪಂಜರದ ಅಳತೆ 6 ಮೀx2 ಮೀx2 ಮೀ. ಇದ್ದು 24 ಟನ್‌ಗಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಪ್ರತೀ ಘನ ಮೀಟರ್‌ಗೆ 50 ಮೀನುಗಳಂತೆ, ಈ ಪಂಜರಕ್ಕೆ ಶಿಫಾರಸು ಮಾಡಲಾದ ಬೆರಳುದ್ದದ ಮೀನು ಮರಿಗಳ ದಾಸ್ತಾನು ಸಂಖ್ಯೆ 1,200 ಆಗಿರುತ್ತದೆ. ಪಂಜರವನ್ನು ನೀರಿನಲ್ಲಿ ಮೂರು ಅವಧಿಗೂ ಉಳಿಸಿಕೊಳ್ಳಬಹುದು. ಮೀನುಗಳು 18ರಿಂದ 20 ತಿಂಗಳುಗಳಲ್ಲಿ 3ರಿಂದ 5 ಕೆ.ಜಿ ಬೆಳವಣಿಗೆ ಹೊಂದುವುದರಿಂದ ಮೀನು ಕೃಷಿಯನ್ನು ಎರಡು ವರ್ಷಗಳಿಗೆ ಮುಂದುವರಿಸಿದರೆ ಪ್ರತೀ ಪಂಜರದಿಂದ ಸರಾಸರಿ 3.2 ಟನ್‌ಗಳಷ್ಟು ಮೀನು ಉತ್ಪಾದನೆ ಮಾಡಬಹುದು.

ಸರ್ವ ನೆರವು
“ಆತ್ಮನಿರ್ಭರ್‌ ಭಾರತ’ ಪರಿಕಲ್ಪನೆಯಲ್ಲಿ ಯುವಕರು ಸ್ವ ಉದ್ಯೋಗ ಮಾಡುವ ಉದ್ದೇಶದಿಂದ “ಪಂಜರ ಕೃಷಿ’ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ 100 ತರಬೇತಿ ಆಯೋಜಿಸಲಾಗಿದೆ. ಆ. 29ರಂದು ಮಂಗಳೂರಿನಲ್ಲಿ, ಸೆ. 5ರಂದು ಉತ್ತರ ಕನ್ನಡದಲ್ಲಿ ಶಿಬಿರ ನಡೆಯಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಖಾತೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next