ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಕಳೆದ ನಾಲ್ಕು ದಿನಗಳಿಂದ ಸಮೀಪದ ನಂದಗಾಂವ-ಅವರಾದಿ, ಅಕ್ಕಿಮರಡಿ-ಮಿರ್ಜಿ, ಢವಳೇಶ್ವರ-ಢವಳೇಶ್ವರ ಸೇತುವೆಯು ಜಲಾವೃತವಾಗಿವೆ.
ಗುರುವಾರ ಸಂಜೆ ಮಾಹಿತಿಯಂತೆ ಹಿಡಕಲ್ ಜಲಾಶಯಕ್ಕೆ 29133 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಒಟ್ಟು 51 ಟಿಎಂಸಿ ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ 46 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂ ಭರ್ತಿಯಾಗಲು ಕೆಲವೇ ಅಡಿಗಳು ಬಾಕಿಯಿರುವ ಕಾರಣ ಗುರುವಾರ ಮಧ್ಯಾಹ್ನ 3 ಗಂಟೆಯಿಂದ 10 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದೆ.
ಸದ್ಯ ಹಿರಣ್ಯಕೇಶಿ ನದಿಯಿಂದ ಬರುವ ನೀರು ದುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಬರುತ್ತಿದೆ. ಗುರುವಾರ ದುಪದಾಳ ಜಲಾಶಯಕ್ಕೆ 17377 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅದರಲ್ಲಿ 16373 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ, 1004 ಕ್ಯೂಸೆಕ್ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಹರಿಸಲಾಗುತ್ತಿದೆ.
ಬಳ್ಳಾರಿ ನಾಲಾ, ಮಾರ್ಕಂಡೆಯ ಉಪ ನದಿಗಳ ನೀರು ಸಹ ಗೋಕಾಕ ಹತ್ತಿರ ಘಟಪ್ರಭಾ ನದಿಗೆ ಬಂದು ಸೇರುತ್ತವೆ. ಗುರುವಾರ ಮಾಹಿತಿಯಂತೆ ಗೋಕಾಕ ಪಟ್ಟಣದ ಲೋಳಸೂರ ಬ್ರೀಜ್ ಹತ್ತಿರ 22895 ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಬಿಟ್ಟಿರುವ ಹಿಡಕಲ್ ಜಲಾಶಯದ 10 ಸಾವಿರ ಕ್ಯೂಸೆಕ್ ನೀರು ಸೇರಿ ಸದ್ಯ ಘಟಪ್ರಭಾ ನದಿಗೆ ಸುಮಾರು 32 ಸಾವಿರ ಕ್ಯೂಸೆಕ್ ನೀರು ಬರುತ್ತಿರುವ ಕಾರಣ ಘಟಪ್ರಭಾ ನದಿಯ ಈ ಭಾಗದ ಮೂರು ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಪರಿಸ್ಥಿತಿಯು ಮುಂದುವರೆದಿದೆ. ಹಿಡಕಲ್ ಜಲಾಶಯಕ್ಕೆ ಒಳಹರಿವು ನೀರು ಜಾಸ್ತಿ ಇರುವ ಕಾರಣ ಶುಕ್ರವಾರ ಮುಂಜಾನೆ ವೇಳೆಗೆ ಜಲಾಶಯದಿಂದ ಹೊರ ಬಿಡುತ್ತಿರುವ 10 ಸಾವಿರ ಕ್ಯೂಸೆಕ್ 15 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ.