Advertisement

3 ದಿನಗಳಲ್ಲಿ 10 ಉಗ್ರರ ಸಂಹಾರ!- ಕುಲ್ಗಾಂ, ರಜೌರಿಯಲ್ಲಿ ಒಂದೇ ದಿನ 6 ಭಯೋತ್ಪಾದಕರ ಹತ್ಯೆ

09:35 PM Nov 17, 2023 | Pranav MS |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಹಾರ ಮುಂದುವರಿದಿದ್ದು, ಗುರುವಾರ ಆರಂಭವಾಗಿ ಶುಕ್ರವಾರ ಮುಗಿದ ಎನ್‌ಕೌಂಟರ್‌ನಲ್ಲಿ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದರ ಜೊತೆಗೆ, ರಜೌರಿಯಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆಗೈಯ್ಯಲಾಗಿದೆ. ಈ ಮೂಲಕ 3 ದಿನಗಳಲ್ಲಿ ಒಟ್ಟು 10 ಉಗ್ರರನ್ನು ಭದ್ರತಾ ಪಡೆಗಳು ಸಂಹರಿಸಿದಂತಾಗಿದೆ.

Advertisement

ಗುರುವಾರ ಕುಲ್ಗಾಂ ಜಿಲ್ಲೆಯ ನೆಹಾಮಾ ಗ್ರಾಮದಲ್ಲಿ ಉಗ್ರರ ಉಪಸ್ಥಿತಿ ಕುರಿತು ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಸೇನೆಯ 34 ರಾಷ್ಟ್ರೀಯ ರೈಫ‌ಲ್ಸ್‌, 9 ಪ್ಯಾರಾ ವಿಶೇಷ ಘಟಕ, ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶೋಧ ಕಾರ್ಯ ಆರಂಭಿಸಿದ್ದವು. ಈ ವೇಳೆ, ಏಕಾಏಕಿ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಬರೋಬ್ಬರಿ 18 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಶುಕ್ರವಾರ ಬೆಳಗಿನ ಜಾವದವರೆಗೂ ಕಾರ್ಯಾಚರಣೆ ಮುಂದುವರಿದು, ಉಗ್ರರು ಅಡಗಿದ್ದ ಮನೆಗೆ ಬೆಂಕಿ ಬಿದ್ದ ಕಾರಣ, ಅನಿವಾರ್ಯವಾಗಿ ಉಗ್ರರೆಲ್ಲರೂ ಹೊರಬರಬೇಕಾಯಿತು. ಡ್ರೋನ್‌ ದೃಶ್ಯಗಳನ್ನು ಆಧರಿಸಿ ಎಲ್ಲ ಐವರ ಮೃತದೇಹಗಳಿದ್ದ ಪ್ರದೇಶಗಳನ್ನೂ ಪತ್ತೆಹಚ್ಚಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿ.ಕೆ. ಬಿರ್ದಿ ಹೇಳಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ, ರಜೌರಿಯ ಬುಧಾಲ್‌ನಲ್ಲಿ ಮನೆಯೊಂದರಿಂದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಯೋಧರು ಪ್ರತಿದಾಳಿ ನಡೆಸಿ ಆತನನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಎಕೆ-47 ರೈಫ‌ಲ್‌, ಮೂರು ಮ್ಯಾಗಜಿನ್‌ಗಳು, 3 ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬುಧವಾರವಷ್ಟೇ ಉರಿ ವಲಯದ ಎಲ್‌ಒಸಿಯಲ್ಲಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಲಷ್ಕರ್‌ನ ಪ್ರಮುಖ ಕಮಾಂಡರ್‌ ಬಶೀರ್‌ ಅಹ್ಮದ್‌ ಮಲಿಕ್‌ ಸೇರಿ ಇಬ್ಬರು ಉಗ್ರರನ್ನು ಹಾಗೂ ಪ್ರತ್ಯೇಕ ಘಟನೆಯಲ್ಲಿ ಮತ್ತಿಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next