ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕು ಪಂಚಾಯತಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಗೆ 15 ಸದಸ್ಯರಲ್ಲಿ 10 ಜನ ಸದಸ್ಯರು ಗೈರು ಹಾಜರಾಗಿದ್ದರಿಂದ ಕೋರಂ ಕೊರತೆಯಿಂದ ಸಭೆ ಮುಂದೂಡಿದ ಅಪರೂಪದ ಘಟನೆ ನಡೆಯಿತು.
ಜಿಲ್ಲೆಯ ಮೂರು ತಾಪಂಗಳಿಗೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಹುಬ್ಬಳ್ಳಿ ಮತ್ತು ನವಲಗುಂದ ತಾಪಂಗಳಿಗೆ ಮಾತ್ರ ಅನುದಾನ ಬಿಡುಗಡೆ ಆಗಿಲ್ಲ. ಈ ಬಾರಿ ಅನುದಾನದಲ್ಲಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಜಿಲ್ಲಾ ಪಂಚಾಯತಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಆದರೆ ತಾಲೂಕು ಪಂಚಾಯತಿಗೆ ಮಾತ್ರ ಏನೋ ಇಲ್ಲ.
ಇದು ತಾರತಮ್ಯದ ಪರಮಾವಧಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ತಾಲೂಕು ಪಂಚಾಯಿತಿಗೆ 1.35 ಕೋಟಿ ರೂ. ಅನುದಾನ ಬಂದಿತ್ತು. ಈ ಬಾರಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು.
ಆದರೆ ಅನುದಾನ ಹೆಚ್ಚಿನ ಮಾಡುವುದಿರಲಿ, ಅನುದಾನವೇ ಬಿಡುಗಡೆ ಮಾಡಿಲ್ಲ. ಈ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾಪಂನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಧಾರವಾಡ, ಕುಂದಗೋಳ ಮತ್ತು ಕಲಘಟಗಿ ತಾಪಂಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ನವಲಗುಂದ ಮತ್ತು ಹುಬ್ಬಳ್ಳಿ ತಾಪಂಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.
ಇದರಿಂದ ನವಲಗುಂದ ತಾಪಂ ಸಭೆಯನ್ನು ಕರೆಯಲಾಗಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಬೇಸರಗೊಂಡಿರುವ ಸದಸ್ಯರುಮಂಗಳವಾರ ನಡೆಯಬೇಕಾಗಿದ್ದ ತಾಪಂ ಸಭೆಗೆ ಆಗಮಿಸದೆ, ಹೊಟೇಲ್‌ವೊಂದರಲ್ಲಿ ಸಭೆ ನಡೆಸಿ 10 ಜನರು ಗೈರು ಹಾಜರಾಗುವ ನಿರ್ಧಾರ ಕೈಗೊಂಡಿದ್ದಾಗಿ ಸದಸ್ಯರೊಬ್ಬರು ತಿಳಿಸಿದರು.
ತಾಪಂ ಸಾಮಾನ್ಯ ಸಭೆಗೆ ತಾಲೂಕಿನ ಎಲ್ಲ ಅಧಿಕಾರಿಗಳು, ಪಿಡಿಒಗಳು ತಾಪಂ ಸಾಮಾನ್ಯ ಸಭೆ ಇರುವುದರಿಂದ ಬೆಳಿಗ್ಗೆ 11:00 ಗಂಟೆಯಿಂದ ಕಾಯುತ್ತಿದ್ದರು. ಸದಸ್ಯರ ಕೊರತೆಯಿಂದ 12:10ಗಂಟೆ ಸುಮಾರಿಗೆ ತಾಪಂ ಸಾಮಾನ್ಯ ಸಭೆಗೆ ಅಧ್ಯಕ್ಷೆ ಚನ್ನಮ್ಮ ಗೋರ್ಲ, ಉಪಾಧ್ಯಕ್ಷೆ ಸರೋಜಾ ಅಳಗವಾಡಿ,
ಸದಸ್ಯರಾದ ಬಸವರಾಜ ಸಾಲಿ, ಬಸಪ್ಪ ಬೀರಣ್ಣವರ, ದೇವಕ್ಕ ಸವ್ವಾಸೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೋರಂ ಅಭಾವದಿಂದ ಸಭೆಯನ್ನು 10 ನಿಮಿಷ ಮುಂದೂಡಿದರು. ಅನಂತರವೂ ಸದಸ್ಯರು ಆಗಮಿಸದ್ದರಿಂದ ಸಭೆಯನ್ನು ಮುಂದೂಡಲಾಯಿತು.