ಬೆಂಗಳೂರು: ವಿಧಾಸನೌಧ ಶೌಚಾಲಯದಲ್ಲಿ ಗ್ರಂಥಾಲಯ ಮೇಲ್ವಿಚಾರಕ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಸಿಎಆರ್ ಸಬ್‌ಇನ್‌ಸ್ಪೆಕ್ಟರ್ ಸೇರಿ ಹತ್ತು ಮಂದಿಯನ್ನು ಅಮಾನತುಗೊಳಿಸಲಾಗಿದೆ.
ವಿಧಾನಸೌಧದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್‌ಐ ಮಹದೇವ, ಎಎಸ್‌ಐ ಶಿವಲಿಂಗಯ್ಯ, ಹೆಡ್‌ಕಾನ್‌ಸ್ಟೆಬಲ್ ಜಕಾರಿಯಸ್, ಲಕ್ಷ್ಮಮ್ಮ, ಕಾನ್‌ಸ್ಟೆಬಲ್‌ಗಳಾದ ಯಲ್ಲಪ್ಪ, ಆನಂದ ನಾಯ್ಕ, ಕೆನೆತ್, ಸವಿತಾ ಹಲಕಾವಟಿಗಿ, ಸೀಮಾ, ಎಂ.ನಿವೇದಿತಾ ಅವರನ್ನು ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಸಿಎಆರ್ ಜಂಟಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಜೂ.24ರಂದು ವಿಧಾನಸೌಧ ಪ್ರವೇಶಿಸಿದ್ದ ಗ್ರಂಥಾಲಯ ಮೇಲ್ವಿಚಾರಕ ರೇವಣ್ಣ ಕುಮಾರ್, ಸಿಎಂಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಬೇಸರಗೊಂಡು ಶೌಚಾಲಯಕ್ಕೆ ತೆರಳಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಆ ದಿನ ವಿಧಾನಸೌಧದ ಭದ್ರತೆಗೆ ಮೊದಲ ಪಾಳಿಯಲ್ಲಿ ಅಂಬೇಡ್ಕರ್ ದ್ವಾರ ಮತ್ತು ಪೂರ್ವ ದ್ವಾರಗಳಲ್ಲಿ ಹತ್ತು ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರೇವಣ್ಣ, ವಿಧಾನಸೌಧ ಪ್ರವೇಶಿಸಿರುವ ಬಗ್ಗೆ ನೋಂದಣಿ ಪುಸ್ತಕದಲ್ಲಿ ನಮೂದಿಸದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ.
ಪ್ರವೇಶ ದ್ವಾರಗಳಲ್ಲಿ ಸರಿಯಾಗಿ ಗುರುತಿನ ಚೀಟಿ ಮತ್ತು ಪಾಸ್‌ಗಳನ್ನು ಪರಿಶೀಲಿಸಿಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ವಿಧಾನಸೌಧ ಪ್ರವೇಶಿಸುವಾಗ ಆತನ ಬಳಿ ಡಿಪಿಎಆರ್ ನೀಡಿರುವ ಪಾಸ್ ಆಗಲಿ ಅಥವಾ ಸಚಿವಾಲಯದ ನೌಕರರ ಗುರುತಿನ ಚೀಟಿ ಇರಲಿಲ್ಲ.
ಆದರೂ ಅವರು ವಿಧಾನಸೌಧ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಸಿಬ್ಬಂದಿ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ. ಈ ಸಂಬಂಧ 10 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.